ADVERTISEMENT

ಸಿಯಾಚಿನ್ ಯೋಧರ ಜತೆ ಮೋದಿ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ ನೀರ್ಗಲ್ಲು ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಸೇನಾ ಸಿಬ್ಬಂದಿಗಳ ಜೊತೆಗೆ ದೀಪಾವಳಿ ಆಚರಿಸಿದರು.

ಈ ಸಂದರ್ಭದಲ್ಲಿ ಯೋಧರ ಸೇವೆಯನ್ನು ಪ್ರಶಂಸಿಸಿದ ಅವರು, ‘ದೇಶವಾಸಿಗಳು ಯೋಧರಿಗೆ ಹೆಗಲೆಣೆಯಾಗಿದ್ದಾರೆ’ ಎಂದರು.
‘ನೀವು (ಯೋಧರು) ಇಲ್ಲಿ ಸದಾ  ಮೈಯೆಲ್ಲಾ ಕಣ್ಣಾಗಿ ಗಡಿ ಕಾಯುತ್ತಿರುವುದರಿಂದಲೇ ದೇಶದ ಪ್ರಜೆಗಳು ಮನೆಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿದೆ’ ಎಂದೂ ಹೇಳಿದರು.

‘ಈ ನೀರ್ಗಲ್ಲಿನ ಪ್ರದೇಶದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸುವ ಸುಯೋಗ ಪ್ರಧಾನಿಯೊಬ್ಬರಿಗೆ ಬಹುಶಃ ಇದೇ ಮೊದಲ ಬಾರಿಗೆ ಲಭಿಸಿದೆ.  ನಿಮ್ಮೆಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು. ಹಾಗೆಯೇ ರಾಷ್ಟ್ರಪತಿ ಅವರಿಗೂ ಶುಭ ಕೋರುವೆ. ಪ್ರಣವ್‌ ದಾ ಅವರಿಗೆ ಈ ಶುಭಾಶಯ ಅನನ್ಯವಾದುದು ಎಂದು ಭಾವಿಸುವೆ’ ಎಂದು ಮೋದಿ ಅಲ್ಲಿಂದಲೇ ಟ್ವೀಟ್‌ ಮಾಡಿದ್ದಾರೆ. ಅಲ್ಲಿ ಕಳೆದ ಸಮಯದ ಕೆಲ ಚಿತ್ರಗಳನ್ನು ಟ್ವಿಟರ್‌ಗೆ ಹಾಕಿದ್ದಾರೆ.

ಸಿಯಾಚಿನ್‌ಗೆ ಹೋಗುವುದಕ್ಕೂ ಮೊದಲು ದೆಹಲಿಯಲ್ಲಿ ಮಾತನಾಡಿದ ಅವರು, ‘ಮರಗಟ್ಟುವ ಚಳಿಯನ್ನು ಲೆಕ್ಕಿಸದೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಪ್ರತಿಯೊಬ್ಬ ದೇಶವಾಸಿಯ ಬೆಂಬಲವಿದೆ ಎಂಬ ಸಂದೇಶವನ್ನು ತಿಳಿಸಲು ಅಲ್ಲಿಗೆ ಹೋಗುತ್ತಿದ್ದೇನೆ’ ಎಂದರು.

‘ಸಿಯಾಚಿನ್‌ನಲ್ಲಿನ ಎಷ್ಟೊಂದು ಪ್ರತಿಕೂಲ ವಾತಾವರಣ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರಾಕೃತಿಕ ಸವಾಲುಗಳನ್ನು ಎದುರಿಸಿ ತಾಯ್ನಾಡಿನ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಯೋಧರ ಸೇವೆ ಅನನ್ಯ. ಅವರು ದೇಶದ ಘನತೆ– ಗೌರವಗಳನ್ನು ಎತ್ತಿಹಿಡಿದಿದ್ದಾರೆ’ ಎಂದು ಮೋದಿ ಸ್ಮರಿಸಿದರು.2005ರಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್‌ಸಿಂಗ್‌ ಸಿಯಾಚಿನ್‌ಗೆ ಭೇಟಿ ನೀಡಿದ್ದರು.

ಕಾಶ್ಮೀರಕ್ಕೆ  745 ಕೋಟಿ
ಶ್ರೀನಗರ (ಪಿಟಿಐ): ಪ್ರವಾಹದಿಂದ ತತ್ತರಿಸಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಹಾರ ಕಾರ್ಯಗಳಿಗೆ 745 ಕೋಟಿಗಳ ವಿಶೇಷ ನೆರ­ವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ­ದ್ದಾರೆ. ಮನೆಗಳ ದುರಸ್ತಿಗೆ 570 ಕೋಟಿ ಮತ್ತು ಆರು ಆಸ್ಪತ್ರೆಗಳ ತುರ್ತು ನವೀಕರಣಕ್ಕೆ 175 ಕೋಟಿ ಬಿಡುಗಡೆ ಮಾಡುವುದಾಗಿ ಮೋದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT