ADVERTISEMENT

ಸುದ್ದಿ ಮಾಧ್ಯಮದಲ್ಲಿ ಶೇ 100 ಎಫ್‌ಡಿಐ: ಅಭಿಪ್ರಾಯ ಸಂಗ್ರಹ

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವಡೇಕರ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2014, 19:30 IST
Last Updated 1 ಜೂನ್ 2014, 19:30 IST

ಮುಂಬೈ (ಪಿಟಿಐ): ಸುದ್ದಿ ಮಾಧ್ಯಮ­ದಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಬೇಕೇ ಎನ್ನುವುದರ ಕುರಿತು ಅದಕ್ಕೆ ಸಂಬಂಧಿಸಿದವರಿಂದ ತಮ್ಮ ಸಚಿವಾಲಯ ಅಭಿಪ್ರಾಯ ಕೇಳುತ್ತಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ  ಪ್ರಕಾಶ್‌ ಜಾವಡೇಕರ್‌್ ತಿಳಿಸಿದ್ದಾರೆ.

‘ಈ ವಿಷಯವಾಗಿ ಅಂತಿಮ ನಿರ್ಧಾರ ತಳೆಯುವುದಕ್ಕೆ ಮುನ್ನ ಅದಕ್ಕೆ ಸಂಬಂಧಿಸಿದವರಿಂದ ಅನಿಸಿಕೆ ಕೇಳಲು ಬಯಸಿದ್ದೇವೆ. ಆದರೆ ಇದನ್ನು ಜಾರಿಗೊಳಿಸಲು ಆತುರ ಮಾಡುತ್ತಿಲ್ಲ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಸ್ತುತ  ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನ ಮಾಧ್ಯಮಗಳಿಗೆ ಶೇ 26ರಷ್ಟು ಎಫ್‌ಡಿಐ ಮಿತಿ ಇದೆ. ಸುದ್ದಿಯೇತರ ಮಾಧ್ಯಮಗಳಾದ ಪ್ರಕಾಶನ ಸಂಸ್ಥೆಗಳು ಹಾಗೂ ಸಾಮಾನ್ಯ ಮನರಂಜನಾ ವಾಹಿನಿಗಳಲ್ಲಿ (ಜಿಇಸಿ) ಶೇ 100ರಷ್ಟು ಎಫ್‌ಡಿಐಗೆ ಅವಕಾಶ ಇದೆ.

‘ಕಾಸಿಗಾಗಿ ಸುದ್ದಿ’ ವಿಷಯವನ್ನು ಚರ್ಚಿಸುವುದಕ್ಕೆ ಶೀಘ್ರವೇ ಸಂಪುಟ ಸಚಿವರ ಸಭೆ ನಡೆಸಲಾಗುತ್ತದೆ. ಈ ವಿಷಯವನ್ನು ಪರಾಮರ್ಶಿಸುವುದಕ್ಕೆ ರಚಿಸಲಾಗಿರುವ ಸಮಿತಿಯ ಅಂತಿಮ ಸಭೆ ಸೋಮವಾರ ನಡೆಯಲಿದೆ. ನಾನು ಕೂಡ ಈ ಸಮಿತಿ ಸದಸ್ಯ’ ಎಂದೂ ಸಚಿವರು ತಿಳಿಸಿದರು.

‘ಖಾಸಗಿ ಮಾಲೀಕತ್ವದ ಎಫ್‌ಎಂ ರೇಡಿಯೊ ವಾಹಿನಿಗಳಿಗೆ ಸುದ್ದಿ ಪ್ರಸಾರ ಮಾಡುವುದಕ್ಕೆ ಅವಕಾಶ ನೀಡುವ ಕುರಿತು ಕೇಂದ್ರವು ಪರಿಶೀಲನೆ ನಡೆಸುತ್ತಿದೆ’ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT