ADVERTISEMENT

ಸುಪ್ರೀಂ ತೀರ್ಪು: ಕಾರ್ಯಕರ್ತರಿಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ ಅಡಿಯಲ್ಲಿ ಸಲಿಂಗರತಿಯನ್ನು  ಅಪರಾಧಮುಕ್ತಗೊಳಿಸುವಂತೆ ಮೊತ್ತ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದ ಎನ್‌ಜಿಒ ನಾಜ್‌ ಪ್ರತಿಷ್ಠಾನವು ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ತೀರ್ಪು ನಮಗೆ ನಿರಾಶೆ ಉಂಟು ಮಾಡಿದೆ. ತೀರ್ಪು ಕಾನೂನು ಪ್ರಕಾರ ಸಮರ್ಪಕವಲ್ಲ ಎಂಬುದು ನಮ್ಮ ಭಾವನೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಿ­ದ್ದೇವೆ’ ಎಂದು ನಾಜ್‌ ಪ್ರತಿಷ್ಠಾನದ ಪರವಾಗಿ ವಾದಿಸಿದ ಹಿರಿಯ ವಕೀಲ ಆನಂದ್‌ ಗ್ರೋವರ್‌ ಹೇಳಿದ್ದಾರೆ.

ತೀರ್ಪು ಸಂದರ್ಭದಲ್ಲಿ ನ್ಯಾಯಾಲ­ಯ­ದಲ್ಲಿ ಹಾಜರಿದ್ದ ಎನ್‌ಜಿಒ ಕಾರ್ಯ­ಕರ್ತರ ಮುಖ­ದಲ್ಲಿ ನಿರಾಶೆ ಎದ್ದು ಕಾಣು­ತ್ತಿತ್ತು. ತೀರ್ಪು ಜೀವ­ನದ ಹಕ್ಕನ್ನೇ ಕಸಿದು­ಕೊಂಡಿದೆ ಎಂದು ಕೋರ್ಟ್‌ ಹೊರಗಿದ್ದ ಕಾರ್ಯ­ಕರ್ತ­ರೊಬ್ಬರು ಹೇಳಿ­ದರು.  ಸಲಿಂಗಿ ಅಥವಾ ಲೈಂಗಿಕ ಅಲ್ಪ­ಸಂಖ್ಯಾ­ತರಾಗಿ ಹುಟ್ಟುವುದು ಆ ಮಗುವಿನ ತಪ್ಪಲ್ಲ. ಅದೊಂದು ಸಹಜ ವಿದ್ಯಮಾನ. ಹೀಗಾಗಿ ಸಲಿಂಗಿಗಳು ಅಥವಾ ಲೈಂಗಿಕ ಅಲ್ಪ­ಸಂಖ್ಯಾ­ತರನ್ನು ಯಾರೂ ದೂಷಿಸು­ವಂತಿಲ್ಲ ಎಂದೂ  ಹೇಳಿದರು.

ಶಾಸನ ರಚನೆ ಸಾಧ್ಯತೆ
ಸಲಿಂಗರತಿ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿ­ದೆ. ಈ ವಿಷ­ಯದ ನಿರ್ವಹಣೆಗೆ ಸರ್ಕಾರವು ಶಾಸನ ರಚನೆ ಹಾದಿ­ಯಲ್ಲಿ ಸಾಗುವ ಸೂಚನೆ ನೀಡಿದೆ.

ಸಲಿಂಗರತಿಯನ್ನು ಕಾನೂನುಬಾ­ಹಿರ­­ಗೊಳಿಸುವ ದಂಡ ಸಂಹಿತೆಯ ಸೆಕ್ಷನ್ ರದ್ದುಗೊಳಿಸುವ ಅಧಿಕಾರ ಸಂಸತ್‌ಗೆ ಇದೆ ಎಂದು ಕೋರ್ಟ್‌ ಕೂಡ ಹೇಳಿದೆ. ಹಾಗಾಗಿ ಈಗ ಚೆಂಡು ಸಂಸತ್ತಿನ ಅಂಗಳಕ್ಕೆ ಬಂದು ಬಿದ್ದಿದೆ.

ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸರ್ಕಾರ ಖಂಡಿತವಾ­ಗಿಯೂ ಗಣನೆಗೆ ತೆಗೆದುಕೊಳ್ಳಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್‌ ತಿವಾರಿ ಹೇಳಿದ್ದಾರೆ. ವೀರಪ್ಪ ಮೊಯಿಲಿ ಕಾನೂನು ಸಚಿವರಾ­ಗಿ­ದ್ದಾಗ ಸಲಿಂಗರತಿ­ಯನ್ನು ಕಾನೂನು­ಬಾಹಿರ ಎಂದು ಪರಿಗಣಿಸುವ 377­ನೇ ಸೆಕ್ಷನ್ ಅಪರಾಧಮುಕ್ತ­ಗೊಳಿ­ಸ­ಬೇಕು ಎಂದು ಅವರು ಹೇಳಿರು­ವು­ದನ್ನು ಮನೀಶ್‌ ನೆನಪಿಸಿ­ಕೊಂ­ಡಿದ್ದಾರೆ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT