ADVERTISEMENT

ಸೂಪರ್‌ಸ್ಟಾರ್ ಶ್ರೀದೇವಿಗೆ ವಿದಾಯ

ಪಿಟಿಐ
Published 28 ಫೆಬ್ರುವರಿ 2018, 19:56 IST
Last Updated 28 ಫೆಬ್ರುವರಿ 2018, 19:56 IST
ಶ್ರೀದೇವಿ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ವೇಳೆ ಪತಿ ಬೋನಿ ಕಪೂರ್ ಮತ್ತು ಮಗಳು ಖುಷಿ ಜೊತೆಗೆ ಇದ್ದರು –ಪಿಟಿಐ ಚಿತ್ರ
ಶ್ರೀದೇವಿ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವ ವೇಳೆ ಪತಿ ಬೋನಿ ಕಪೂರ್ ಮತ್ತು ಮಗಳು ಖುಷಿ ಜೊತೆಗೆ ಇದ್ದರು –ಪಿಟಿಐ ಚಿತ್ರ   

ಮುಂಬೈ: ದುಬೈನಲ್ಲಿ ಕಳೆದ ವಾರ ಮೃತಪಟ್ಟಿದ್ದ ಬಹುಭಾಷಾ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಬುಧವಾರ ಇಲ್ಲಿ ನಡೆಯಿತು.

ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದ ಸ್ಮಶಾನದಲ್ಲಿ ಅಯ್ಯಂಗಾರ್‌ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶ್ರೀದೇವಿ ಪತಿ ಬೋನಿ ಕಪೂರ್‌ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಶ್ರೀದೇವಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನವನ್ನು ಆಯೋಜಿಸಿದ್ದ ಅಂಧೇರಿ ವೆಸ್ಟ್‌ನಲ್ಲಿರುವ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಬುಧವಾರ ಜನಸಾಗರವೇ ಸೇರಿತ್ತು.

ADVERTISEMENT

ಕಪೂರ್ ಕುಟುಂಬದ ಎಲ್ಲರೂ ಶ್ರೀದೇವಿ ಅವರ ಅಂತಿಮ ದರ್ಶನ ಪಡೆದರು. ನಟಿ ಐಶ್ವರ್ಯ ರೈ, ನಟರಾದ ಅಮಿತಾಭ್ ಬಚ್ಚನ್, ಶಾರೂಕ್ ಖಾನ್‌, ಸಲ್ಮಾನ್‌ ಖಾನ್‌, ತಂತ್ರಜ್ಞರು, ನಿರ್ಮಾಪಕರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಸಾರ್ವಜನಿಕರಿಗೆ ಕ್ಲಬ್‌ನೊಳಕ್ಕೆ ಪ್ರವೇಶ ಸಿಗದ ಕಾರಣ, ಕ್ಲಬ್‌ನ ಹೊರಭಾಗದಲ್ಲೇ ಕಾದು ನಿಂತಿದ್ದರು. ಶ್ರೀದೇವಿ ಅವರ ಶವ ಇದ್ದ ವಾಹನವು ಕ್ಲಬ್‌ನಿಂದ ವಿಲೆ ಪಾರ್ಲೆ ಸೇವಾ ಸಮಾಜದ ಸ್ಮಶಾನದವರೆಗೆ ಮೆರವಣಿಗೆ ಹೋಗುವಾಗ ಸಾವಿರಾರು ಮಂದಿ ಅದನ್ನು ಹಿಂಬಾಲಿಸಿದರು.

ಸುಮಾರು 5 ಕಿ.ಮೀ. ದೂರದ ಈ ಅಂತರವನ್ನು ಕ್ರಮಿಸಲು 1 ಗಂಟೆ 45 ನಿಮಿಷ ಬೇಕಾಯಿತು.

ಅಂತ್ಯಕ್ರಿಯೆ ನಡೆಯುವಾಗ ಹಲವು ಅಭಿಮಾನಿಗಳು ರಸ್ತೆಯಲ್ಲೇ ನಿಂತು ಹೂಗಳನ್ನು ಅರ್ಪಿಸಿ, ಕಣ್ಣೀರಿಟ್ಟರು.

**

ತನಿಖೆಗೆ ಒತ್ತಾಯ, ವಿರೋಧ

ಮುಂಬೈ: ಶ್ರೀದೇವಿ ಅವರ ಸಾವಿನ ಕುರಿತು ತನಿಖೆಯಾಗಬೇಕು ಎಂದು ಕೆಲವು ಸಾಮಾಜಿಕ ಕಾರ್ಯಕರ್ತರು ಮುಂಬೈ ಪೊಲೀಸರಿಗೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

‘ಶ್ರೀದೇವಿಯವರದ್ದು ಆಕಸ್ಮಿಕ ಸಾವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ. ದುಬೈ ಪೊಲೀಸರು ಹೇಳುತ್ತಿರುವುದನ್ನು ನಾವು ಏಕೆ ನಂಬಬೇಕು? ಈ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಯುವ ಅಗತ್ಯವಿದೆ. ಹೀಗಾಗಿ ಮುಂಬೈ ಪೊಲೀಸರು ತನಿಖೆ ಆರಂಭಿಸಬೇಕು’ ಎಂದು ವಕೀಲ ಆದಿಲ್ ಖತ್ರಿ ಎಂಬುವವರು ಮುಂಬೈ ಪೊಲೀಸ್ ಆಯುಕ್ತರಿಗೆ ಇ–ಮೇಲ್ ಮಾಡಿದ್ದಾರೆ.

ಇಂಥದ್ದೇ ಬೇಡಿಕೆ ಇರುವ ಇ–ಮೇಲ್ ಒಂದನ್ನು ವಕೀಲ ಎಸ್.ಬಾಲಕೃಷ್ಣನ್ ಎಂಬುವವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಕಳುಹಿಸಿದ್ದಾರೆ.

‘ಇದೊಂದು ಆಕಸ್ಮಿಕ ಸಾವು ಎಂಬುದು ಸಾಬೀತಾಗಿದೆ. ತನಿಖೆಯಿಂದ ಯಾವುದೇ ಉಪಯೋಗವಿಲ್ಲ’ ಎಂದು ವಕೀಲೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಅಬಾ ಸಿಂಗ್ ಹೇಳಿದ್ದಾರೆ.

(ಶ್ರೀದೇವಿ ಚಿತ್ರದೊಂದಿಗೆ ಅಭಿಮಾನಿ)

**

‘ದುಃಖಿಸಲು ಅವಕಾಶ ನೀಡಿ’

‘ಶ್ರೀದೇವಿಯ ಸಾವಿಗೆ ದುಃಖಿಸಲು ನಮಗೂ ಅವಕಾಶ ನೀಡಿ’ ಎಂದು ಕಪೂರ್ ಕುಟುಂಬ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದೆ.

‘ಕಳೆದ ನಾಲ್ಕು ದಿನಗಳಲ್ಲಿ ಇಡೀ ದೇಶ ನಮ್ಮ ನೆರವಿಗೆ ನಿಂತಿದೆ. ಶ್ರೀದೇವಿಗೆ ನೀವು ತೋರಿದ ಪ್ರೀತಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಕಪೂರ್ ಕುಟುಂಬ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

‘ಶ್ರೀದೇವಿ ಬಹಳ ಘನತೆಯಿಂದ ಬದುಕಿದ್ದರು. ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ. ಆಕೆ ಬದುಕಿದ್ದಾಗ ನೀಡಿದ ಗೌರವವನ್ನು, ಅವಳ ಮರಣಾನಂತರವೂ ನೀಡಬೇಕೆಂದು ನಾವು ಮಾಧ್ಯಮಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.