ADVERTISEMENT

ಸೇನಾ ಪಡೆಯ ನಿವೃತ್ತ ಅಧಿಕಾರಿ ನಿವಾಸದ ಮೇಲೆ ದಾಳಿ: 117 ಕೆಜಿ ನೀಲ್ ಗಾಯ್ ಮಾಂಸ, 40 ಗನ್‍ ಪತ್ತೆ

ಏಜೆನ್ಸೀಸ್
Published 30 ಏಪ್ರಿಲ್ 2017, 10:20 IST
Last Updated 30 ಏಪ್ರಿಲ್ 2017, 10:20 IST
ಕೃಪೆ: ಎಎನ್‍ಐ
ಕೃಪೆ: ಎಎನ್‍ಐ   

ಮೀರತ್: ಸೇನಾಪಡೆಯ ನಿವೃತ್ತ ಅಧಿಕಾರಿಯೊಬ್ಬರ ನಿವಾಸದ ಮೇಲೆ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ (ಡಿಆರ್‌ಐ) ಮತ್ತು ಅರಣ್ಯ ಇಲಾಖೆಯವರು ದಾಳಿ ನಡೆಸಿದ್ದು ಭಾರಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿದ್ದಾರೆ.

ನಿವೃತ್ತ ಅಧಿಕಾರಿಯ ಮನೆಯಲ್ಲಿ ಅಂದಾಜು 117 ಕೆಜಿ ನೀಲ್ ಗಾಯ್ (ವೈಜ್ಞಾನಿಕ ಹೆಸರು-Boselaphus tragocamelus) ಮಾಂಸ, ₹1 ಕೋಟಿ ನಗದು, ಪ್ರಾಣಿಗಳ ಚರ್ಮ ಮತ್ತು 40 ಗನ್‍ಗಳು ದಾಳಿ ವೇಳೆ ಪತ್ತೆಯಾಗಿದೆ.

ಮೀರತ್‍ನ ಸಿವಿಲ್ ಲೈನ್ಸ್ ನಲ್ಲಿರುವ ಕರ್ನಲ್ ದೇವೇಂದ್ರ ಕುಮಾರ್ ಅವರ ನಿವಾಸದ ಮೇಲೆ ನಿನ್ನೆ ಮಧ್ಯಾಹ್ನ ನಡೆದ ದಾಳಿ ಭಾನುವಾರ ಮುಂಜಾನೆ 3.30ರ ವರೆಗೆ ಮುಂದುವರಿದಿತ್ತು.

ADVERTISEMENT

117ಕೆಜಿ ನೀಲ್ ಗಾಯ್ ಮಾಂಸ, ₹1 ಕೋಟಿ ನಗದು,  40 ಗನ್‍ಗಳು, 5 ಜಿಂಕೆಗಳ ತಲೆಬರುಡೆ, ಕಡವೆಯ ಕೊಂಬು, ಸಾರಂಗದ ಕವಲ್ಗೊಂಬು, ಪ್ರಾಣಿಗಳ ಚರ್ಮ ಮತ್ತು ಆನೆ ದಂತ ಮೊದಲಾದವುಗಳು ದೇವೇಂದ್ರ ಕುಮಾರ್ ಅವರ ಮನೆಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅರಣ್ಯಾಧಿಕಾರಿ ಮುಖೇಶ್ ಕುಮಾರ್, ನೀಲ್ ಗಾಯ್ ಮಾಂಸ ರೆಫ್ರಿಜರೇಟರ್‍‍ನಲ್ಲಿ ಪತ್ತೆಯಾಗಿತ್ತು.ಮಾಂಸದ ಸ್ಯಾಂಪಲ್‍ನ್ನು ಹೆಚ್ಚಿನ ಪರೀಕ್ಷೆಗಾಗಿ ಲ್ಯಾಬ್‍ಗೆ ಕಳಿಸಿಕೊಡಲಾಗಿದೆ. ದೇವೇಂದ್ರ ಅವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಕರ್ನಲ್ ದೇವೇಂದ್ರ ಕುಮಾರ್ ಅವರ ಪುತ್ರ ಪ್ರಶಾಂತ್ ಬಿಶ್ನೋಯ್ ರಾಷ್ಟ್ರಮಟ್ಟದ ಶೂಟರ್ ಆಗಿದ್ದಾರೆ. ಡಿಎನ್‍ಎ ಮಾಧ್ಯಮ ವರದಿ ಪ್ರಕಾರ ಕಳೆದ ನವೆಂಬರ್‍‍ನಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಬಿಶ್ನೋಯ್ 65ನೇ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.