ADVERTISEMENT

ಸೇವಾವಧಿ ನಿಗದಿ ಸೂಕ್ತವಲ್ಲ: ಲೋಧಾ

ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2014, 19:30 IST
Last Updated 27 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ‘ಸುಪ್ರೀಂ­ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ­ಗಳಿಗೆ ನಿಗದಿತ ಸೇವಾವಧಿ ಇರಬೇಕು’ ಎಂಬ ಪ್ರತಿ­ಪಾದನೆ­ಯನ್ನು ತಾವು ಬೆಂಬಲಿಸು­ವುದಿಲ್ಲ ಎಂದು ಭಾರತದ ನೂತನ ಮುಖ್ಯ ನ್ಯಾಯ­ಮೂರ್ತಿ ರಾಜೇಂದ್ರ ಮಲ್‌ ಲೋಧಾ ಸ್ಪಷ್ಟಪಡಿಸಿದ್ದಾರೆ.

ದೇಶದ 41ನೇ ಮುಖ್ಯ ನ್ಯಾಯ­ಮೂರ್ತಿ­ಯಾಗಿ ಭಾನು­ವಾರ ಅಧಿಕಾರ ಸ್ವೀಕರಿಸಿದ  ನಂತರ ಆರ್‌.ಎಂ.ಲೋಧಾ ಹೀಗೆ ಹೇಳಿದರು.
ನಿಕಟಪೂರ್ವ ಮುಖ್ಯ ನ್ಯಾಯ­ಮೂರ್ತಿ ಪಿ.ಸದಾಶಿವಂ ಅವರು, ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ­ಗಳಿಗೆ 2 ವರ್ಷಗಳ ಸೇವಾವಧಿ­ನಿಗದಿ ಮಾಡಬೇಕು ಎಂದು ಸಲಹೆ ನೀಡಿದ್ದರು.

‘ನನ್ನ ನಿಲುವು ಇದಕ್ಕಿಂತ ಸ್ವಲ್ಪ ಭಿನ್ನ­ವಾಗಿದೆ. ಹೀಗೆ ಸೇವಾವಧಿ ನಿಗದಿ ಮಾಡಿದರೆ ಮುಂದೆ ಆ ಸ್ಥಾನಕ್ಕೆ ಬರಬಯಸುವ ಅರ್ಹ­ರಿಗೆ ಅನ್ಯಾಯ­ವಾಗುವ ಸಾಧ್ಯತೆ ಇರುತ್ತದೆ. ಸುಪ್ರೀಂ­ಕೋರ್ಟ್‌ ನ್ಯಾಯಮೂರ್ತಿಗಳ ಸೇವಾ ಅವಧಿ ಈಗ ಸರಾಸರಿ ಸುಮಾರು 4 ವರ್ಷ ಇದೆ. ಹೀಗಿರು­ವಾಗ ಮುಖ್ಯ ನ್ಯಾಯ­ಮೂರ್ತಿ­ಯ­ವರಿಗೆ 2 ವರ್ಷ ಸೇವಾವಧಿ ನಿರೀ­ಕ್ಷಿಸು­­ವುದು ಎಷ್ಟರಮಟ್ಟಿಗೆ ಸೂಕ್ತ’ ಎಂದರು.
‘ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರ­ದರ್ಶಕತೆ ತಂದು ನ್ಯಾಯಮೂರ್ತಿ­ಗಳಾಗಿ ನಿಷ್ಕಳಂಕ ವ್ಯಕ್ತಿತ್ವದವರನ್ನು ನೇಮಕ ಮಾಡು­ವುದಕ್ಕೆ ಆದ್ಯತೆ ನೀಡುತ್ತೇನೆ’ ಎಂದರು.

‘ನ್ಯಾಯಮೂರ್ತಿ ನೇಮಕಕ್ಕೆ ಮುನ್ನ ನೇಮ­ಕಾತಿ ಮಂಡಳಿ ಸದಸ್ಯ­ರೊಂದಿಗೆ ಚರ್ಚಿ­ಸುವ ಜತೆಗೆ ಮಂಡಳಿ­ಯಲ್ಲಿಲ್ಲದ ಪ್ರಾಮಾ­ಣಿಕರಾದ ಇಬ್ಬರು,­ಮೂವರು ನ್ಯಾಯ­ಮೂರ್ತಿ­ಗಳು ಹಾಗೂ ಇಬ್ಬರು–ಮೂವರು ವಕೀಲರ ಜತೆ ಚರ್ಚಿಸಲು ಒತ್ತು ನೀಡುತ್ತೇನೆ. ಆದರೆ ಇದರ ಅರ್ಥ ನೇಮಕಾತಿ ಮಂಡಳಿ ವಿಧಿವಿಧಾನವನ್ನು ಬದಲಾಯಿ­ಸಬೇಕು ಎಂದಲ್ಲ’  ಎಂದರು.

ಗಣ್ಯರ ಉಪಸ್ಥಿತಿ: ಇದಕ್ಕೆ ಮುನ್ನ, ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಣವ್‌್ ಮುಖರ್ಜಿ ಅವರು ಪ್ರಮಾಣ ವಚನ ಬೋಧಿಸಿದರು.  ಲೋಧಾ ಅವರು ಅಲ್ಪ ಅವ­ಧಿಗೆ, ಅಂದರೆ, 5 ತಿಂಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ. ಸೆಪ್ಟೆಂಬರ್‌ 27ಕ್ಕೆ ನಿವೃತ್ತರಾಗಲಿದ್ದಾರೆ.


ಸಿಬಿಐ ಅನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತ­ಗೊಳಿಸಿ, ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಬಂಧ ನೀಡಿದ ಆದೇಶ­ಗಳಲ್ಲಿ ಲೋಧಾ ಪಾತ್ರ ಪ್ರಮುಖವಾಗಿತ್ತು ಎನ್ನುವುದು ವಿಶೇಷ.‘ನ್ಯಾಯಾಲಯಗಳ ಮೇಲ್ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ  ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಸರ್ಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ’ ಎಂದು ಲೋಧಾ ನೇತೃತ್ವದ ಪೀಠ ಮಹತ್ವದ ತೀರ್ಪು ನೀಡಿತ್ತು.

‘ಕಲ್ಲಿದ್ದಲು ನಿಕ್ಷೇಪ ಹಗರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಿಬಿಐ, ಅಧಿಕಾರದಲ್ಲಿರುವ ರಾಜಕೀಯ ಮುಖಂಡರೊಂದಿಗೆ ವಿನಿಮಯ ಮಾಡಿಕೊಳ್ಳುವಂತಿಲ್ಲ’ ಎಂದು ಲೋಧಾ ನೇತೃತ್ವದ ಪೀಠ ಆದೇಶ ನೀಡಿತ್ತು. ಇದರಿಂದಾಗಿ ಕಳೆದ ಮೇ ತಿಂಗಳಿನಲ್ಲಿ ಕಾನೂನು ಸಚಿವ ಸ್ಥಾನಕ್ಕೆ ಅಶ್ವನಿ ಕುಮಾರ್‌್ ರಾಜೀನಾಮೆ ನೀಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT