ADVERTISEMENT

ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆ ನೀಡುವುದು ಸ್ವಯಂ ಪ್ರೇರಿತ ಕಾರ್ಯ

ಪಿಟಿಐ
Published 25 ಅಕ್ಟೋಬರ್ 2016, 11:22 IST
Last Updated 25 ಅಕ್ಟೋಬರ್ 2016, 11:22 IST
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್   

ನವದೆಹಲಿ: ಪಾಕಿಸ್ತಾನದ ಕಲಾವಿದರಿಗೆ ಅವಕಾಶ ನೀಡಿದ ಸಿನಿಮಾ ನಿರ್ಮಾಪಕರು ಪ್ರಾಯಃಶ್ಚಿತ್ತವಾಗಿ ಸೈನಿಕರ ಕಲ್ಯಾಣ ನಿಧಿಗೆ ₹5 ಕೋಟಿ ದೇಣಿಗೆ ನೀಡಬೇಕೆಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖ್ಯಸ್ಥ ರಾಜ್ ಠಾಕ್ರೆ ಹೇಳಿರುವುದರ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದಾರೆ.

ಠಾಕ್ರೆ ಅವರ ಹೇಳಿಕೆ ವಿವಾದ ಸೃಷ್ಟಿಸಿದ್ದು, ಸೈನಿಕರ ಕಲ್ಯಾಣ ನಿಧಿಗೆ ದೇಣಿಗೆ ನೀಡುವುದು ಸ್ವಯಂ ಪ್ರೇರಿತ ಕಾರ್ಯ, ಅದಕ್ಕಾಗಿ ಯಾರನ್ನೂ ಬಲವಂತ ಮಾಡುವಂತಿಲ್ಲ ಎಂದು ಪರಿಕ್ಕರ್ ಹೇಳಿದ್ದಾರೆ.

ಬುಧವಾರ ಆರಂಭವಾಗಲಿರುವ ನೌಕಾಧಿಕಾರಿಗಳ ಸಮ್ಮೇಳನದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸೇನಾ ಕಲ್ಯಾಣ ನಿಧಿಗೆ ದೇಣಿಗೆಯನ್ನು ಸ್ವಇಚ್ಛೆಯಿಂದ ನೀಡಬೇಕು. ಇನ್ನೊಬ್ಬರಿಂದ ಬಲವಂತವಾಗಿ ಕಸಿದುಕೊಳ್ಳಬಾರದು ಎಂದಿದ್ದಾರೆ.

ADVERTISEMENT

ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾದಲ್ಲಿ ಪಾಕ್ ಕಲಾವಿದ ಫವಾದ್ ಖಾನ್ ನಟಿಸಿದ್ದರಿಂದ, ಚಿತ್ರ ಬಿಡುಗಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಡ್ಡಿಯೊಡ್ಡಿತ್ತು, ಪಾಕ್ ಕಲಾವಿದರಿಗೆ ಭಾರತೀಯ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕಾಗಿ ಪ್ರಾಯಶ್ಚಿತ ರೂಪದಲ್ಲಿ ಸೈನಿಕರ ಕಲ್ಯಾಣ ನಿಧಿಗೆ ₹ 5 ಕೋಟಿ ದೇಣಿಗೆ ನೀಡಿದರೆ ಮಾತ್ರ ಚಿತ್ರ ಬಿಡುಗಡೆಗೆ ಅವಕಾಶ ನೀಡಲಾಗುವುದು ಎಂದು ಠಾಕ್ರೆ ಷರತ್ತು ಹಾಕಿದ್ದರು.

ಆದಾಗ್ಯೂ, ಚಿತ್ರದ ನಿರ್ಮಾಪಕ -ನಿರ್ದೇಶಕರು ಈ ಷರತ್ತಿಗೆ ಒಪ್ಪಿದ್ದರೂ, ಸಿನಿಮಾ ನಿರ್ಮಾಪಕರಿಂದ ವಸೂಲಿ ಮಾಡಿದ ಹಣವನ್ನು ನಾವು ಸ್ವೀಕರಿಸುವುದಿಲ್ಲ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದರು.

ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಸಾರ್ವಜನಿಕರೂ ನೆರವು ನೀಡಬಹುದಾಗಿದೆ. ಅದಕ್ಕಾಗಿ ಸೇನೆ ಪ್ರತ್ಯೇಕ ನಿಧಿಯನ್ನು ಮಾಡಿದೆ. ಈ ನಿಧಿಯ ಕಾರ್ಯಗಳನ್ನು ರಕ್ಷಣಾ ಸಚಿವಾಲಯವೇ ನಿರ್ವಹಿಸುತ್ತದೆ ಎಂದು ಪರಿಕ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.