ADVERTISEMENT

‘ಸೋನಿಯಾ ನಿರ್ಧಾರಕ್ಕೆ ಜೆಡಿಎಸ್‌ ಬೆಂಬಲ’

ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
‘ಸೋನಿಯಾ ನಿರ್ಧಾರಕ್ಕೆ ಜೆಡಿಎಸ್‌ ಬೆಂಬಲ’
‘ಸೋನಿಯಾ ನಿರ್ಧಾರಕ್ಕೆ ಜೆಡಿಎಸ್‌ ಬೆಂಬಲ’   
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಶುಕ್ರವಾರ ಸಭೆ ಆಯೋಜಿಸಿದ್ದು, ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ. ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.
 
ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಳ್ಳಬಹುದಾಗಿದೆ. ಅದಕ್ಕೆ ಜೆಡಿಎಸ್‌ ಬೆಂಬಲಿಸಲಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 
ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌ ಎಲ್ಲ ಪಕ್ಷಗಳ ಮುಖಂಡರನ್ನು ಆಹ್ವಾನಿಸಿದ್ದು, ಜೆಡಿಎಸ್‌ ಪರ ಮಂಡ್ಯ ಸಂಸದ ಪುಟ್ಟರಾಜು, ಜೆಡಿಯುನ ಶರದ್‌ ಯಾದವ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ಡಿಎಂಕೆ ಪಕ್ಷದ ಸ್ಟಾಲಿನ್‌ ಹಾಗೂ ಎಡ ಪಕ್ಷಗಳ ಮುಖಂಡರೂ ಪಾಲ್ಗೊಳ್ಳಲಿದ್ದಾರೆ.
 
ಜಾತ್ಯತೀತ ನಿಲುವನ್ನು ಹೊಂದಿರುವ ಪಕ್ಷಗಳು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಭರವಸೆ ಇದೆ ಎಂದು ಅವರು ಹೇಳಿದರು. ‘ರಾಜ್ಯ ವಿಧಾನಸಭೆಗೆ ಅವಧಿಗೆ ಮೊದಲೇ ಚುನಾವಣೆ ನಡೆಯುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ. ಯಾವಾಗ ಚುನಾವಣೆ ನಡೆದರೂ ಎದುರಿಸಲು ನಾವು ಸಿದ್ಧ’ ಎಂದು ಅವರು ಸ್ಪಷ್ಟಪಡಿಸಿದರು.
 
‘ಚುನಾವಣೆ ತಂತ್ರಗಾರಿಕೆ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ವತಿಯಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ಹಣ ಇರುವವರು ಇಂಥ ಪ್ರಯೋಗ ಮಾಡುತ್ತಾರೆ. ನಮ್ಮದು ಬಡವರ ಪಕ್ಷ. ನಮ್ಮ ಬಳಿ ಹಣ ಇಲ್ಲ. ಮೇಲಾಗಿ ಸಮೀಕ್ಷೆ ಬಗ್ಗೆ ನಮಗೆ ಒಲವು, ನಂಬಿಕೆ ಇಲ್ಲ’ ಎಂದು ಅವರು ವಿವರಿಸಿದರು.
 
‘ನಮ್ಮ ಕುಟುಂಬ ₹ 20,000 ಕೋಟಿ ಅಕ್ರಮ ಆಸ್ತಿ ಹೊಂದಿದೆ ಎಂದು ವೆಂಕಟೇಶಗೌಡ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ ಎನ್ನಲಾದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ.

ಬೆಂಗಳೂರಿನಲ್ಲಿರುವ ಲೀಲಾ ಪ್ಯಾಲೇಸ್‌ ಹೋಟೆಲ್‌ ನನ್ನದೇ ಎಂದು 20 ವರ್ಷಗಳ ಹಿಂದೆ ಕೆಲವರು ಆರೋಪ ಮಾಡಿದ್ದರು. ಬಿಜೆಪಿಯವರು ಇಂತಹ ಕಾರ್ಯಕ್ಕೆ ಕೈಹಾಕುವುದರಲ್ಲಿ ನಿಸ್ಸೀಮರು. ಆ ಆರೋಪಗಳಲ್ಲಿ ಹುರುಳಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರೂ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇರಲಿಲ್ಲ ಎಂದು ದೇವೇಗೌಡ ಅಭಿಪ್ರಾಯಪಟ್ಟರು.
****
ಇಂದು ವಿರೋಧ ಪಕ್ಷಗಳ ಸಭೆ

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಒಗ್ಗಟ್ಟು ಮುರಿಯುವ ಕಾರ್ಯತಂತ್ರ ರೂಪಿಸುವುದಕ್ಕಾಗಿ ವಿರೋಧ ಪಕ್ಷಗಳ ಮುಖ್ಯಸ್ಥರ ಜತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಸಭೆ ನಡೆಸಲಿದ್ದಾರೆ.

‘ಪಾರ್ಲಿಮೆಂಟ್‌ ಲೈಬ್ರೆರಿ ಬಿಲ್ಡಿಂಗ್‌’ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಲಿರುವ ಭೋಜನ ಕೂಟ ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಪಿಎಂ ಮುಖ್ಯಸ್ಥ ಸೀತಾರಾಮ್‌ ಯೆಚೂರಿ, ಜೆಡಿಯು ಮುಖಂಡ ಶರದ್‌ ಯಾದವ್‌, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.