ADVERTISEMENT

ಸ್ಟೇಟ್ ಬ್ಯಾಂಕ್ ಆಫ್ ‘ಟೊಮೆಟೊ’!

ಪಿಟಿಐ
Published 3 ಆಗಸ್ಟ್ 2017, 19:30 IST
Last Updated 3 ಆಗಸ್ಟ್ 2017, 19:30 IST
ಸ್ಟೇಟ್ ಬ್ಯಾಂಕ್ ಆಫ್ ‘ಟೊಮೆಟೊ’!
ಸ್ಟೇಟ್ ಬ್ಯಾಂಕ್ ಆಫ್ ‘ಟೊಮೆಟೊ’!   

ಲಖನೌ: ಉತ್ತರಪ್ರದೇಶದ ಲಖನೌನಲ್ಲಿ ‘ಸ್ಟೇಟ್ ಬ್ಯಾಂಕ್ ಆಫ್ ಟೊಮೆಟೊ’ ಆರಂಭವಾಗಿದೆ. ಈ ಬ್ಯಾಂಕ್‌ನಲ್ಲಿ ಟೊಮೆಟೊ ಕೊಳ್ಳಲು ಸುಲಭ ಸಾಲ, ಟೊಮೆಟೊ ಠೇವಣಿಗೆ ಆಕರ್ಷಕ ಬಡ್ಡಿ ಮತ್ತು ಲಾಕರ್ ಸೌಲಭ್ಯ ಒದಗಿಸಲಾಗಿದೆ.

ಇದೇನಿದು ಬ್ಯಾಂಕ್ ಆಫ್ ಟೊಮೆಟೊ? ಟೊಮೆಟೊ ಕೊಳ್ಳಲೂ ಸಾಲವೇ? ಟೊಮೆಟೊಗೂ ಲಾಕರ್ ಸೌಲಭ್ಯವೇ ಎಂದು ನೀವು ಹುಬ್ಬೇರಿಸಬಹುದು. ಇದು ಟೊಮೆಟೊ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸಲು ಉತ್ತರಪ್ರದೇಶದ ಕಾಂಗ್ರೆಸ್ ಘಟಕ ಕಂಡುಕೊಂಡ ವಿಭಿನ್ನ ಮಾರ್ಗ!

ಪ್ರತಿಭಟನೆಯ ಅಂಗವಾಗಿ, ಇಲ್ಲಿನ ಮಾಲ್ ಅವೆನ್ಯುನಲ್ಲಿರುವ ಯುವ ಕಾಂಗ್ರೆಸ್ ಕಚೇರಿಯಲ್ಲಿ ‘ಬ್ಯಾಂಕ್’ ಅನ್ನು ತೆರೆಯಲಾಗಿದೆ. ತೀವ್ರ ಆಸಕ್ತಿ ಕೆರಳಿಸಿದ ಈ ಬ್ಯಾಂಕಿಗೆ 18 ಗ್ರಾಹಕರು ಭೇಟಿ ನೀಡಿದ್ದಾರೆ.

ADVERTISEMENT

ಬ್ಯಾಂಕ್‌ನ ‘ಪ್ರಧಾನ ವ್ಯವಸ್ಥಾಪಕ’ ಹುದ್ದೆ ವಹಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಅನುಷ್ ಅವಸ್ತಿ, ‘ಠೇವಣಿ ಇರಿಸಿದ ಟೊಮೆಟೊಗಳು ದ್ವಿಗುಣವಾಗುವುದು, ವಿಶೇಷವಾಗಿ, ಬಡವರಿಗೆ ಟೊಮೆಟೊ ಖರೀದಿಗೆ ಶೇ 80ರಷ್ಟು ಸಾಲ ನೀಡುವುದು– ಹೀಗೆ ನಮ್ಮಲ್ಲಿ ಹಲವು ಆಕರ್ಷಕ ಯೋಜನೆಗಳಿವೆ’ ಎಂದರು.

‘ಕೆಲವು ಅಂಗಡಿಯವರು ಟೊಮೆಟೊ ಠೇವಣಿ ಇಡುತ್ತಿದ್ದಾರೆ. ಈಗಾಗಲೇ 11 ಕೆ.ಜಿ ಠೇವಣಿ ಬಂದಿದೆ. ಒಂದೂವರೆ ಕೆ.ಜಿ ಮಾರಾಟ ಮಾಡಿದ್ದೇವೆ. ಗ್ರಾಹಕರು ₹ 10ರಂತೆ ಕಂತಿನಲ್ಲಿ ಹಣ ಪಾವತಿಸುತ್ತಾರೆ’ ಎಂದು ಹೇಳಿದ್ದಾರೆ.

‘ಇದು ಪ್ರತಿಭಟನೆ ದಾಖಲಿಸುವ ಪರಿ ಅಷ್ಟೇ ಅಲ್ಲ. ಬದಲಾಗಿ, ತರಕಾರಿ ಬೆಲೆ ಗಗನಕ್ಕೇರುತ್ತಿರುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಇದೆ’ ಎಂದರು.

‘ಗ್ರಾಹಕರ ಪ್ರತಿಕ್ರಿಯೆ ಚೆನ್ನಾಗಿದ್ದು ಅಲಿಗಂಜ್‌ನಲ್ಲಿ ಮತ್ತೊಂದು ಶಾಖೆ ಆರಂಭಿಸಿದ್ದೇವೆ’ ಎಂದ ಅನುಷ್, ‘ಬ್ಯಾಂಕ್ ವ್ಯವಹಾರದ ವೇಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.