ADVERTISEMENT

ಸ್ಪೈಸ್‌ ಜೆಟ್‌ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 7:19 IST
Last Updated 17 ಡಿಸೆಂಬರ್ 2014, 7:19 IST

ನವದೆಹಲಿ: ಇಂಧನ ಪೂರೈಕೆಯಾಗದ ಹಿನ್ನಲೆಯಲ್ಲಿ ಸ್ಪೈಸ್‌ ಜೆಟ್‌ ಕಂಪೆನಿಯ ವಿಮಾನಯಾನ ಸೇವೆ ಬುಧವಾರವೂ ಸ್ಥಗಿತಗೊಂಡಿತು.

ಇದೇ ಕಾರಣಕ್ಕೆ ಮಂಗಳವಾರ ಕೂಡ ಹಾರಾಟ ರದ್ದಾಗಿತ್ತು. ಬುಧವಾರ ಕಂಪೆನಿಯ ಒಂದೇ ಒಂದು ವಿಮಾನವೂ ಆಗಸಕ್ಕೆ ಏರಿಲ್ಲ ಎಂದು ಮೂಲಗಳು ಸುದ್ದಿಸಂಸ್ಥೆಗೆ ದೃಢಪಡಿಸಿವೆ.

ಹಳೆಯ ಬಾಕಿಯನ್ನು ಪಾವತಿಸಿದ ಹೊರತು ಹೊಸದಾಗಿ ಇಂಧನ ಪೂರೈಸಲು ಸಾಧ್ಯವಿಲ್ಲ ಎಂದು ತೈಲ ಮಾರಾಟ ಕಂಪೆನಿಗಳು ಪಟ್ಟು ಹಿಡಿದಿವೆ. ಹೀಗಾಗಿ ಹಳೆ ಬಾಕಿಯನ್ನು ಆದಷ್ಟು ಬೇಗನೇ  ಪಾವತಿಸಿ, ಸಂಚಾರ ಪುನರಾರಂಭಿಸುವ ಒತ್ತಡದಲ್ಲಿ ಕಂಪೆನಿ ಸಿಲುಕಿದೆ. ಬ್ಯಾಂಕುಗಳಿಂದ ಸಾಲ ಪಡೆದು, ಹಳೆ ಬಾಕಿ ತೀರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಮೂಲಗಳು ಹೇಳಿವೆ.

ಸ್ಪೈಸ್‌ ಜೆಟ್‌, ತೈಲ ಮಾರಾಟ ಕಂಪೆನಿಗಳ ಜತೆ ಮಾಡಿಕೊಂಡಿರುವ ಒಪ್ಪಂದದಂತೆ ಎರಡು ವಾರಗಳಿಗೊಮ್ಮೆ ಹಳೆ ಬಾಕಿ ಪಾವತಿಸಬೇಕು. ಆದರೆ, ಮೂಲಗಳ ಪ್ರಕಾರ ಹಳೆಯ ಬಾಕಿ ಮೊತ್ತ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ.

ಹಳೆ ಬಾಕಿ ಪಾವತಿ ಅವಧಿಯನ್ನು 15 ದಿನಗಳು ವಿಸ್ತರಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ತೈಲ ಮಾರಾಟ ಕಂಪೆನಿಗಳಿಗೆ ಮನವಿ ಮಾಡಿದೆ. ಸ್ಪೈಸ್‌ಜೆಟ್‌ಗೆ 600 ಕೋಟಿ ಸಾಲದ ನೆರವು ನೀಡುವಂತೆಯೂ ಬ್ಯಾಂಕುಗಳಿಗೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT