ADVERTISEMENT

ಸ್ವಯಂ ದೃಢೀಕರಣ ಪ್ರೋತ್ಸಾಹಕ್ಕೆ ಸೂಚನೆ

ವಾರ್ಷಿಕ ವೆಚ್ಚ ₨8 ಸಾವಿರ ಕೋಟಿಗೂ ಹೆಚ್ಚು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಭಾರತೀಯರು ಪ್ರಮಾಣ­ಪತ್ರಗಳನ್ನು (ಅಫಿಡವಿಟ್‌) ಸಲ್ಲಿಸುವುದಕ್ಕಾಗಿಯೇ ಪ್ರತಿ ವರ್ಷ ₨ 8 ಸಾವಿರ ಕೋಟಿ ವೆಚ್ಚ ಮಾಡು­ತ್ತಿ­ದ್ದಾರೆ.ಹಾಗಾಗಿ ವಿವಿಧ ಕಚೇರಿ ಕೆಲಸಗಳಲ್ಲಿ ದಾಖಲೆ­ಗಳ ಸ್ವಯಂ ದೃಢೀಕರಣಕ್ಕೆ ಪ್ರೋತ್ಸಾಹ ನೀಡುವಂತೆ ಕೇಂದ್ರ ಸರ್ಕಾರವು ವಿವಿಧ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಈಗ ಅಸ್ತಿತ್ವದಲ್ಲಿರುವ ಪ್ರಮಾಣಪತ್ರ ಸಲ್ಲಿಕೆ ಮತ್ತು ಪತ್ರಾಂಕಿತ ಅಧಿಕಾರಿಗಳಿಂದ ದಾಖಲೆಗಳನ್ನು ದೃಢೀಕರಿಸುವ ಕ್ರಮಗಳನ್ನು ಪುನರ್‌ಪರಿಶೀಲಿಸುವಂತೆ ಕೇಂದ್ರ ಸಚಿವಾಲಯಗಳನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಕೇಳಿಕೊಂಡಿದೆ. ಸಾಧ್ಯ ಇರುವಲ್ಲೆಲ್ಲ ಈ ಪದ್ಧತಿಯನ್ನು ಬದಲಾಯಿಸುವಂತೆ, ಸ್ವಯಂ ದೃಢೀಕರಣಕ್ಕೆ ಪ್ರೋತ್ಸಾಹ ನೀಡುವಂತೆ ಹಾಗೂ ಪ್ರಮಾಣಪತ್ರ ಸಲ್ಲಿಕೆ ಪದ್ಧತಿಯನ್ನು ರದ್ದುಪಡಿಸುವಂತೆ ಸೂಚಿಸಿದೆ.

ಸ್ವಯಂ ದೃಢೀಕರಣ ಪದ್ಧತಿಯು ‘ಜನಸ್ನೇಹಿ’­ಯಾಗಿದ್ದು, ಜನರು ಪ್ರಮಾಣಪತ್ರಕ್ಕೆ ವೆಚ್ಚ ಮಾಡುವ ಹಣ ಉಳಿತಾಯವಾಗುತ್ತದೆ. ಹಾಗೆಯೇ ಸರ್ಕಾರಿ ಅಧಿಕಾರಿಗಳ ಸಮಯ ವ್ಯರ್ಥವಾಗುವುದು ತಪ್ಪುತ್ತದೆ ಎಂದು ಡಿಒಪಿಟಿ ಹೇಳಿದೆ. ಪ್ರಮಾಣಪತ್ರ ಸಲ್ಲಿಸುವುದಕ್ಕೆ ಸಾಕಷ್ಟು ವೆಚ್ಚ ತಗಲುತ್ತದೆ. ಅದಕ್ಕಾಗಿ ಮುದ್ರಾಂಕ ಶುಲ್ಕ ಪಾವತಿಸಬೇಕು, ದಸ್ತಾವೇಜು ಬರಹಗಾರರಿಗೆ ಹಣ ನೀಡಬೇಕು ಮತ್ತು ದೃಢೀಕರಣಕ್ಕೆ ನೋಟರಿಗಳಿಗೆ ಶುಲ್ಕ ನೀಡಬೇಕು. ಇದರ ಜೊತೆಗೆ ಸಮಯ ಮತ್ತು ಶ್ರಮವನ್ನೂ ವಿನಿಯೋಗಿಸಬೇಕು. 

ಇಷ್ಟೆಲ್ಲ ಮಾಡಿ ದರೂ  ಪ್ರಮಾಣಪತ್ರಕ್ಕೆ ಕಾನೂನಿನ ಯಾವುದೇ  ಮಾನ್ಯತೆ ಇಲ್ಲ. ಸ್ವಯಂ ದೃಢೀಕೃತ ದಾಖಲೆಗೂ ಇಷ್ಟೇ ಮಹತ್ವ ಇದ್ದು ಸುಲಭವೂ ಆಗಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ.

ಇದಕ್ಕೆ ಸಂಬಂಧಿಸಿ ಪಂಜಾಬ್‌ನಲ್ಲಿ ಒಂದು ಅಧ್ಯಯನ ನಡೆಸಲಾಗಿದೆ. ಅಲ್ಲಿನ ಅರ್ಧದಷ್ಟು ಕುಟುಂಬಗಳು ಒಂದಲ್ಲ ಒಂದು ಕಾರಣಕ್ಕೆ ಪ್ರತಿ ವರ್ಷ ಪ್ರಮಾಣಪತ್ರ ಸಲ್ಲಿಸುತ್ತವೆ. ಇದನ್ನು ದೇಶಕ್ಕೆ ಅನ್ವಯಿಸಿದರೆ ಕನಿಷ್ಠ 20 ಕೋಟಿಗೂ ಹೆಚ್ಚು ಜನರು ಪ್ರಮಾಣಪತ್ರ ಸಲ್ಲಿಸುತ್ತಾರೆ. ಒಂದು ಪ್ರಮಾಣಪತ್ರಕ್ಕೆ ₨ 400 ವೆಚ್ಚವಾದರೆ  (ಮುದ್ರಾಂಕ ಶುಲ್ಕ, ಇತರ ಶುಲ್ಕಗಳು ಮತ್ತು ಒಂದು ದಿನದ ವೇತನ ಸೇರಿ) ಇಡೀ ದೇಶದ ಜನರು ಪ್ರಮಾಣಪತ್ರಕ್ಕಾಗಿ ವ್ಯಯಿಸುವ ಹಣ ₨ 8 ಸಾವಿರ ಕೋಟಿ ಮೀರುತ್ತದೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.