ADVERTISEMENT

ಹಂತಕಿ ನಳಿನಿ ಅರ್ಜಿ ವಜಾ

ರಾಜೀವ್‌ ಹತ್ಯೆ ಪ್ರಕರಣ: ಬಿಡುಗಡೆಗೆ ಕೇಂದ್ರದ ಒಪ್ಪಿಗೆ ಪ್ರಶ್ನಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಏಳು ಅಪರಾಧಿಗಳ ಬಿಡುಗಡೆಗೆ ತೊಡಕಾಗಿರುವ ಕಾನೂನು  ಪ್ರಶ್ನಿಸಿ ಹಂತಕರ ಪೈಕಿ ಒಬ್ಬಳಾಗಿರುವ ಎಸ್‌. ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಳ್ಳಿ ಹಾಕಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯ­ಮೂರ್ತಿ  ಎಚ್‌.ಎಲ್‌. ದತ್ತು ಹಾಗೂ ನ್ಯಾಯ­ಮೂರ್ತಿ­ಗಳಾದ ಎಂ.ಬಿ. ಲೋಕೂರು,  ಎ.ಕೆ. ಸಿಕ್ರಿ ಅವರನ್ನೊಳಗೊಂಡ ಪೀಠ, ‘ಅರ್ಜಿಯ ವಿಚಾರಣೆಯಲ್ಲಿ ಆಸಕ್ತಿ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ. ಸಿಬಿಐ ತನಿಖೆ ನಡೆಸಿದ ಪ್ರಕರಣದಲ್ಲಿ ನ್ಯಾಯಾ­ಲಯ­ದಿಂದ ಶಿಕ್ಷೆಗೆ ಒಳಗಾದ ಅಪರಾಧಿಗಳನ್ನು  ಅವಧಿಗೂ ಮುನ್ನವೇ ಬಿಡುಗಡೆ ಮಾಡಬೇಕಾದ ಪ್ರಸಂಗ ಎದುರಾದಲ್ಲಿ ರಾಜ್ಯ ಸರ್ಕಾರ ಕಡ್ಡಾಯ­ವಾಗಿ ಕೇಂದ್ರದ ಒಪ್ಪಿಗೆ ಪಡೆಯಬೇಕು ಎಂಬ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 435 (1)(ಎ)   ಪ್ರಶ್ನಿಸಿ ನಳಿನಿ ಅರ್ಜಿ ಸಲ್ಲಿಸಿದ್ದಳು.

‘ತಮಿಳುನಾಡು ಸರ್ಕಾರ ಕಳೆದ 15 ವರ್ಷಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮತ್ತು ಹತ್ತು ವರ್ಷ ಜೈಲಿನಲ್ಲಿ ಕಳೆದ 2200 ಅಪರಾಧಿಗಳನ್ನು ಬಿಡುಗಡೆ ಮಾಡಿದೆ.  ಹೀಗಿರುವಾಗ ಸಿಬಿಐ ತನಿಖೆ ಮಾಡಿದ ಪ್ರಕರಣ­ದಲ್ಲಿ ಶಿಕ್ಷೆಗೆ ಒಳಗಾಗಿದ್ದೇನೆ ಎಂಬ ಒಂದೇ ಕಾರಣದಿಂದ 23 ವರ್ಷ ಜೈಲಿನಲ್ಲಿ ಕಳೆದರೂ ನನ್ನನ್ನು ಬಿಡುಗಡೆ ಮಾಡ­ದಿರು­ವುದು ಯಾವ ನ್ಯಾಯ’ ಎಂದು ನಳಿನಿ ಅರ್ಜಿಯಲ್ಲಿ ಪ್ರಶ್ನಿಸಿದ್ದಳು.

ರಾಜೀವ್‌ ಹಂತಕರಲ್ಲಿ ಒಬ್ಬಳಾಗಿರುವ  ನಳಿನಿ  ಈಗಾಗಲೇ 23 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾಳೆ. ವಿಚಾರಣಾ ನ್ಯಾಯಾಲಯದಿಂದ  1998ರಲ್ಲಿ ಮರಣದಂಡನೆಗೆ ಗುರಿಯಾಗಿದ್ದ ನಳಿನಿ  ಶಿಕ್ಷೆಯನ್ನು 2000ರಲ್ಲಿ  ಜೀವಾವಧಿ ಶಿಕ್ಷೆಗೆ  ಪರಿವರ್ತಿಸಲಾಗಿದೆ.

ರಾಜೀವ್ ಹಂತಕರನ್ನು ಬಿಡುಗಡೆ  ಮಾಡಲು ಮುಂದಾಗಿದ್ದ ತಮಿಳುನಾಡು ಸರ್ಕಾರವು ತನ್ನ ಒಪ್ಪಿಗೆ ಇಲ್ಲದೆ ಹಂತಕರನ್ನು ಬಿಡುಗಡೆ ಮಾಡ­ಬಾರದು ಎಂದು ಕೇಂದ್ರ ಸರ್ಕಾರ ಈ ಹಿಂದೆ ತಾಕೀತು ಮಾಡಿತ್ತು. ಅಲ್ಲದೇ ಸುಪ್ರೀಂ-­ಕೋರ್ಟ್‌­ನಲ್ಲಿ  ಆಕ್ಷೇಪಣಾ  ಅರ್ಜಿಯನ್ನೂ  ಸಲ್ಲಿಸಿತ್ತು.  

ಕೇಂದ್ರ ಸರ್ಕಾರದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್‌, ಮುರುಗನ್‌, ಶಾಂತನ್, ಅರಿವು, ನಳಿನಿ, ರಾಬರ್ಟ್, ಜಯಕುಮಾರ್‌ ಮತ್ತು ರವಿಚಂದ್ರನ್‌  ಬಿಡುಗಡೆಗೆ  ತಡೆಯಾಜ್ಞೆ ನೀಡಿತ್ತು.  ಜತೆಗೆ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.