ADVERTISEMENT

ಹರಿಯಾಣ, ಮಹಾರಾಷ್ಟ್ರದಲ್ಲಿಂದು ಮತದಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಭಾರಿ ಕುತೂಹಲ ಕೆರಳಿಸಿರುವ ಮಹಾ­ರಾಷ್ಟ್ರ ಹಾಗೂ ಹರಿಯಾಣ ವಿಧಾನ­ಸಭಾ ಚುನಾವಣೆಗೆ ವೇದಿಕೆ ಸಿದ್ಧವಾ­ಗಿದ್ದು, ಬುಧವಾರ ಮತದಾನ ನಡೆಯಲಿದೆ.

ಎರಡೂ ರಾಜ್ಯಗಳಲ್ಲಿ ಭಾರಿ ತುರುಸಿ­ನಿಂದ ಕೂಡಿದ್ದ ಬಹಿರಂಗ ಪ್ರಚಾರಕ್ಕೆ ಸೋಮವಾರವೇ ತೆರೆ­ಬಿದ್ದಿದ್ದು,  ಅಭ್ಯರ್ಥಿ­­ಗಳು ಮನೆ, ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಭಾನುವಾರ ಮತ ಎಣಿಕೆ ನಡೆಯ­ಲಿದ್ದು, ಅಂದೇ ಫಲಿತಾಂಶ ಹೊರ­ಬೀಳಲಿದೆ.

ಎರಡೂ ರಾಜ್ಯಗಳ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಹಾಗೂ ಸಾಮರ್ಥ್ಯವನ್ನು ಒರೆಗೆ ಹಚ್ಚ­ಲಿವೆ. ಮಹಾರಾಷ್ಟ್ರದಲ್ಲಿ 15 ವರ್ಷ ಜತೆ­ಯಾಗಿ ಆಡಳಿತ ನಡೆಸಿದ ಕಾಂಗ್ರೆಸ್‌ – ಎನ್‌ಸಿಪಿ ಹಾಗೂ 25 ವರ್ಷ ಮಿತ್ರ ರಾಗಿದ್ದ ಬಿಜೆಪಿ –ಶಿವಸೇನಾ ಈ ಬಾರಿ ಸ್ವತಂತ್ರವಾಗಿ  ಕಣಕ್ಕಿಳಿದಿವೆ. ತುರುಸಿ­ನಿಂದ ಕೂಡಿರುವ ಚತುಷ್ಕೋನ ಸ್ಪರ್ಧೆ­ಯಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾ­ರಾಷ್ಟ್ರ ನವನಿರ್ಮಾಣ ಸೇನೆಯನ್ನೂ ಕಡೆಗಣಿಸುವಂತಿಲ್ಲ.

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಕೇಂದ್ರ ಸಚಿವ ಗೋಪಿನಾಥ ಮುಂಡೆ ಅವರ ಅಕಾಲಿಕ   ದುರ್ಮರಣ ಬಿಜೆಪಿಯನ್ನು ಕಾಡುತ್ತಿದೆ. ಈ ಕೊರತೆ ತುಂಬಲು ಮೋದಿ ಇದುವರೆಗೂ ರಾಜ್ಯದಲ್ಲಿ 27 ರ್‍್ಯಾಲಿ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಮುಖ್ಯ­ಮಂತ್ರಿ ಪೃಥ್ವಿರಾಜ್ ಚವಾಣ್‌, ಎನ್‌ಸಿಪಿ­ಯಿಂದ ಮಾಜಿ ಉಪ ಮುಖ್ಯ­ಮಂತ್ರಿ ಅಜಿತ್ ಪವಾರ್‌, ಮಾಜಿ ಸಚಿವ­ರಾದ ಆರ್‌.ಆರ್‌. ಪಾಟೀಲ್‌, ಛಗನ್ ಭುಜಬಲ್‌ ಹಾಗೂ ಬಿಜೆಪಿಯಿಂದ ಸ್ಪರ್ಧಿ­ಸಿರುವ ದೇವೇಂದ್ರ ಫಡ್ನವಿಸ್‌, ಪಂಕಜಾ ಮುಂಡೆ ಅವರ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ. 

ಹ್ಯಾಟ್ರಿಕ್‌  ನಿರೀಕ್ಷೆಯಲ್ಲಿ ಕಾಂಗ್ರೆಸ್‌:  ತ್ರಿಕೋನ ಸ್ಪರ್ಧೆ ಎದುರಿಸುತ್ತಿರುವ ಹರಿ­ಯಾಣದಲ್ಲಿ ಕಾಂಗ್ರೆಸ್‌ ಹ್ಯಾಟ್ರಿಕ್‌ ಗೆಲು­ವಿನ  ನಿರೀಕ್ಷೆಯಲ್ಲಿದೆ. ಹೇಗಾ­ದರೂ ಸರಿ ಈ ಬಾರಿ ಹರಿಯಾಣವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲೇಬೇಕು ಎಂಬ ಹಟ­ದೊಂದಿಗೆ ಮೋದಿ 11 ಪ್ರಚಾರ ರ್‍್ಯಾಲಿಗಳನ್ನು ನಡೆಸಿದ್ದಾರೆ.


ಭೂಪಿಂದರ್‌ ಸಿಂಗ್‌ ಹೂಡಾ ನೇತೃ­ತ್ವದ ಕಾಂಗ್ರೆಸ್‌ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಹೊರತಾಗಿ ಓಂಪ್ರಕಾಶ್ ಚೌತಾಲಾ ನೇತೃತ್ವದ ಭಾರ­ತೀಯ ರಾಷ್ಟ್ರೀಯ ಲೋಕದಳ ಸ್ಪರ್ಧೆಯ­ಲ್ಲಿದ್ದು  ಪೈಪೋಟಿ ನೀಡಿದೆ. ಸ್ವತಂತ್ರವಾಗಿ ಅಧಿಕಾರ ಹಿಡಿ­ಯುವ ಕನಸಿನಲ್ಲಿರುವ ಬಿಜೆಪಿ ಮೋದಿ ಅಲೆಯನ್ನು ನೆಚ್ಚಿದೆ. 

ಶಿಕ್ಷಕರ ನೇಮಕಾತಿ ಹಗರಣದಲ್ಲಿ ತಿಹಾರ್‌ ಜೈಲು ಸೇರಿದ್ದ ಲೋಕದಳದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚೌತಾಲಾ ಆರೋಗ್ಯ ಕಾರಣ ನೀಡಿ ಜಾಮೀನು ಪಡೆದು ಪಕ್ಷದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದನ್ನು ಸಿಬಿಐ ಆಕ್ಷೇಪಿಸಿದ ಕಾರಣ ದೆಹಲಿ ಹೈಕೋರ್ಟ್‌ ಚೌತಾಲಾ ಅವರನ್ನು ಮರಳಿ ಜೈಲಿಗೆ ಕಳಿಸಿದೆ. ಇದ­ರಿಂದ ಲೋಕದಳಕ್ಕೆ ತೀವ್ರ ಹಿನ್ನಡೆ­ಯಾಗಿದೆ. ಲೋಕದಳ ಬಹುಸಂಖ್ಯಾತ ಜಾಟ್ ಮತಗಳನ್ನು ನೆಚ್ಚಿಕೊಂಡಿದೆ.

ಈ ಬಾರಿ ರಾಜ್ಯದಲ್ಲಿ ಎರಡು ಹೊಸ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ. ಕಾಂಗ್ರೆಸ್‌ನಿಂದ ಹೊರಬಂದ ಕೇಂದ್ರದ ಮಾಜಿ ಸಚಿವ ವಿನೋದ್ ಶರ್ಮಾ ಸ್ಥಾಪಿಸಿದ ಜನಚೇತನ ಪಕ್ಷ ಹಾಗೂ ಮಾಜಿ ಸಂಸದ ಕುಲದೀಪ್ ಬಿಷ್ಣೋಯಿ ಸ್ಥಾಪಿತ ಹರಿಯಾಣ ಜನಹಿತ ಕಾಂಗ್ರೆಸ್‌ ಮೈತ್ರಿಕೂಟ ಜಾಟ್‌ ಹೊರತಾದ ಮತಗಳ ಮೇಲೆ ಕಣ್ಣಿಟ್ಟಿವೆ.

ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್‌ ಹೂಡಾ, ಚೌತಾಲಾ ಅವರ ಪುತ್ರ ಅಭಯ್‌, ಸೊಸೆ ನೈನಾ, ಮೊಮ್ಮಗ ದುಷ್ಯಂತ್, ಮಾಜಿ ಸಂಸದ ಕುಲದೀಪ್ ಬಿಷ್ಣೋಯಿ, ಪತ್ನಿ ರೇಣುಕಾ, ಸಹೋ­ದರ ಹಾಗೂ ಮಾಜಿ ಉಪ ಮುಖ್ಯ­ಮಂತ್ರಿ ಚಂದ್ರ ಮೋಹನ್‌,  ಕೇಂದ್ರದ ಮಾಜಿ ಸಚಿವ ವಿನೋದ್‌ ಶರ್ಮಾ ಹಾಗೂ ಪತ್ನಿ ಶಕ್ತಿ ರಾಣಿ ಕಣದಲ್ಲಿರುವ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT