ADVERTISEMENT

ಹರಿಯಾಣ: ಮುಂದಿನ ಮುಖ್ಯಮಂತ್ರಿ ಖಟ್ಟರ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 10:21 IST
Last Updated 21 ಅಕ್ಟೋಬರ್ 2014, 10:21 IST

ಚಂಡೀಗಡ, ಹರಿಯಾಣ (ಐಎಎನ್‌ಎಸ್‌/ಪಿಟಿಐ): ಮನೋಹರ್‌ ಲಾಲ್‌ ಖಟ್ಟರ್‌ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮಂಗಳವಾರ ಆಯ್ಕೆಯಾಗಿದ್ದಾರೆ. ಈ ಮೂಲಕ ಜಾಟ್‌ ಸಮುದಾಯೇತರ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಲಿದ್ದಾರೆ.

60 ವರ್ಷದ ಖಟ್ಟರ್‌ ಅವರು ಮಂಗಳವಾರ ಇಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರಾಗಿ ಆಯ್ಕೆಯಾದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮಾಜಿ ಪ್ರಚಾರಕರಾಗಿರುವ ಖಟ್ಟರ್‌ ಅವರು ಇದೇ ಮೊದಲ ಬಾರಿಗೆ ಕರ್ನಲ್ ಕ್ಷೇತ್ರದ ಮೂಲಕ ಹರಿಯಾಣ ವಿಧಾನ ಸಭೆ ಪ್ರವೇಶಿಸಿದವರು.

ADVERTISEMENT

ಮುಖ್ಯಮಂತ್ರಿ ಹಾಗೂ ನೂತನ ಸಚಿವರ ಪ್ರಮಾಣ ವಚನ ಅಕ್ಟೋಬರ್ 26 ರಂದು ನಡೆಯುವ ಸಾಧ್ಯತೆಗಳಿವೆ. ಪ್ರಮಾಣ ವಚನ ಸಮಾರಂಭ ಹರಿಯಾಣ ರಾಜಭವನದ ಬದಲಿಗೆ ಇಲ್ಲಿಂದ 15 ಕಿ.ಮೀ ದೂರದ ಪಂಚಕುಲಾ ನಗರದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯಲಿದೆ ಎನ್ನಲಾಗಿದೆ.

ಅಕ್ಟೋಬರ್‌ 15ರಂದು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಮೊಳಗಿಸಿತ್ತು.

ಕೇಂದ್ರ ಸಚಿವ ವೆಂಕಯ್ಯನಾಯ್ಡು, ಹಾಗೂ ಹಿರಿಯ ಬಿಜೆಪಿ ಮುಖಂಡ ದಿನೇಶ್‌ ಶರ್ಮಾ ಅವರು ಬಿಜೆಪಿ ಸಂಸದೀಯ ಮಂಡಳಿಯ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.