ADVERTISEMENT

ಹಳಿತಪ್ಪಿದ ತಿರುವನಂತಪುರಂ–ಮಂಗಳೂರು ಎಕ್ಸ್‌ಪ್ರೆಸ್‌

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 10:51 IST
Last Updated 28 ಆಗಸ್ಟ್ 2016, 10:51 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಕೊಚ್ಚಿ(ಪಿಟಿಐ): ಹನ್ನೆರಡು ಬೋಗಿಗಳನ್ನೋಳಗೊಂಡ ತಿರುವನಂತಪುರ ಸೆಂಟ್ರಲ್– ಮಂಗಳೂರು ಎಕ್ಸ್‌ಪ್ರೆಸ್‌ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ ಘಟನೆ ಭಾನುವಾರ ಬೆಳಗಿನಜಾವ ಸಂಭವಿಸಿದ್ದು, ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ.

ಎರ್ನಾಕುಲಂ ಜಿಲ್ಲೆಯ ಅಂಗಮಾಲಿ– ಕಾರುಕುಟ್ಟಿ ನಿಲ್ದಾಣದ ಮಧ್ಯೆ ರೈಲು ಸಂಚರಿಸುತ್ತಿದ್ದಾಗ ಬೆಳಗಿನ ಜಾವ 2.30ಕ್ಕೆ ರೈಲು ಹಳಿ ತಪ್ಪಿದೆ. ಯಾವುದೇ ಪ್ರಾಣಾಪಾಯ ಹಾಗೂ ನೋವು ಸಂಭವಿಸಿಲ್ಲ ಎಂದು ದಕ್ಷಿಣ ರೈಲ್ವೆ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರನ್ನು ಬಸ್‌ ಹಾಗೂ ಸ್ಥಳೀಯ ರೈಲುಗಳ ಮೂಲಕ ಕೊಚ್ಚಿ ಹಾಗೂ ತ್ರಿಶೂರ್‌ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.

ಅವಘಡದಿಂದಾಗಿ ಹಾಳಾಗಿರುವ ಎರ್ನಾಕುಲಂ–ತ್ರಿಶೂರು ಮಾರ್ಗದ ರೈಲ್ವೆ ಹಳಿಯ ದುರಸ್ತಿಗೆ 10ಗಂಟೆ ಕಾಲಾವಕಾಶ ಬೇಕಿದ್ದು, ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಕೆಲ ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಚಾರ ವ್ಯತ್ಯಯ
ಮಂಗಳೂರು ವರದಿ: 
ರೈಲು ಹಳಿ ತಪ್ಪಿರುವುದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಂಗಳೂರಿಗೆ ಬರುವ ಎಂಟು ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಈ ಮಾರ್ಗದಲ್ಲಿ ಸಂಚರಿಸುವ ದಕ್ಷಿಣ ರೈಲ್ವೆಯ 21 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಆರು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಐದು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಿದ್ದು, ಐದು ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಐದು ರೈಲುಗಳ ಸಂಚಾರ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಿರುವನಂತಪುರ ಸೆಂಟ್ರಲ್– ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿರುವುದರಿಂದಾಗಿ ಮಂಗಳೂರು ಮಾರ್ಗವಾಗಿ ವಿವಿಧೆಡೆಗೆ ಸಂಚರಿಸುವ ಕೊಂಕಣ ರೈಲ್ವೆಯ ನಾಲ್ಕು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ದಕ್ಷಿಣ ರೈಲ್ವೆ ವಲಯದಲ್ಲಿ ಸಂಚಾರ ರದ್ದುಗೊಂಡಿರುವ ರೈಲುಗಳಲ್ಲಿ ನಾಲ್ಕು ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT