ADVERTISEMENT

ಹಳೆ ನೋಟುಗಳ ಬದಲಾವಣೆ ಕಾಲಾವಧಿ ಮುಗಿದ ನಂತರ ಆರ್‍ಬಿಐ ಗೇಟ್ ಮುಂದೆ ಕಂಡುಬಂದ ವ್ಯಕ್ತಿಗಳ 'ನೋಟು' ಬೇನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 3:52 IST
Last Updated 18 ಮಾರ್ಚ್ 2017, 3:52 IST
ಹಳೆ ನೋಟುಗಳ ಬದಲಾವಣೆ ಕಾಲಾವಧಿ ಮುಗಿದ ನಂತರ ಆರ್‍ಬಿಐ ಗೇಟ್ ಮುಂದೆ ಕಂಡುಬಂದ ವ್ಯಕ್ತಿಗಳ 'ನೋಟು' ಬೇನೆ
ಹಳೆ ನೋಟುಗಳ ಬದಲಾವಣೆ ಕಾಲಾವಧಿ ಮುಗಿದ ನಂತರ ಆರ್‍ಬಿಐ ಗೇಟ್ ಮುಂದೆ ಕಂಡುಬಂದ ವ್ಯಕ್ತಿಗಳ 'ನೋಟು' ಬೇನೆ   

ನವದೆಹಲಿ: ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ನಿರ್ಧಾರವನ್ನು ಪ್ರಕಟಿಸಿದಾಗ ಮಹೇಂದ್ರ ಸಿಂಗ್ (30) ಎಂಬ ಯೋಧ ಸಮುದ್ರಮಟ್ಟದಿಂದ 20,000 ಅಡಿ ಎತ್ತರದ ಸಿಯಾಚಿನ್‍ನಲ್ಲಿ ದೇಶ ಕಾಯುತ್ತಾ ಕರ್ತವ್ಯ ನಿರತರಾಗಿದ್ದರು.

ನೋಟು ರದ್ದಾಗಿರುವ ಬಗ್ಗೆ ಸಿಂಗ್‍ಗೆ ಗೊತ್ತಾಗಿದ್ದು ಮೋದಿ ನಿರ್ಧಾರ ಪ್ರಕಟವಾದ ಕೆಲವು ದಿನಗಳ ನಂತರ. ಸಿಯಾಚಿನ್‍ನಲ್ಲಿ ಹವಾಮಾನ ಸ್ವಲ್ಪ ತಿಳಿಯಾದಾಗ ಮೋದಿಯವರ ನೋಟು ರದ್ದತಿ ತೀರ್ಮಾನದ ಬಗ್ಗೆ ಯೋಧರಿಗೆ ಗೊತ್ತಾಗಿದ್ದು. ಆ ಹೊತ್ತಲ್ಲಿ ಸಿಂಗ್ ಕೈಯಲ್ಲಿ ₹6000 ಮೌಲ್ಯದ ಹಳೆ ನೋಟುಗಳಿದ್ದವು.

ನವೆಂಬರ್ ತಿಂಗಳಿನಲ್ಲಿ ಈತ ರಜೆಗೆ ಅರ್ಜಿ ಸಲ್ಲಿಸಿದ್ದರೂ, ಊರಿಗೆ ಹೋಗಲು 10 ದಿನ ರಜೆ ಸಿಕ್ಕಿದ್ದು ಈ ಮಾರ್ಚ್  ತಿಂಗಳಲ್ಲಿಯೇ. ಕೆಲವು ದಿನಗಳ ಹಿಂದೆಯಷ್ಟೇ ರಾಜಸ್ತಾನದ ಪೋಟಾ ಗ್ರಾಮದಲ್ಲಿರುವ ತನ್ನ ಮನೆಗೆ ತಲುಪಿದ ಸಿಂಗ್, ಎರಡು ದಿನಗಳ ಹಿಂದೆ ನವದೆಹಲಿಯಲ್ಲಿರುವ ಆರ್‍‍ಬಿಐ ಪ್ರಧಾನ ಕಚೇರಿಗೆ ನೋಟು ಬದಲಾವಣೆಗಾಗಿ ಬಂದಿದ್ದರು. ಹಳೆ ನೋಟುಗಳನ್ನು ಬದಲಿಸಲು ಮಾರ್ಚ್ 31ನೇ ತಾರೀಖುವರೆಗೆ ಕಾಲಾವಕಾಶ ಇದೆ ಎಂಬ ನಂಬಿಕೆಯಿಂದ ಸಿಂಗ್ ಆರ್‍‍ಬಿಐಗೆ ಬಂದಿದ್ದರು.

ADVERTISEMENT

ಆದರೆ ಭಾರತದಲ್ಲಿರುವರಿಗೆ 2016 ನವೆಂಬರ್ 8ರಿಂದ ಡಿಸೆಂಬರ್ 30ರ ವರೆಗೆ ಮಾತ್ರ ನೋಟು ಬದಲಾವಣೆ ಮಾಡಲು ಕಾಲಾವಕಾಶ ನೀಡಲಾಗಿತ್ತು. ಮಾರ್ಚ್ 31ರ ವರೆಗೆ ನೋಟು ಬದಲಾವಣೆಗೆ ಅವಕಾಶವಿರುವುದು ಅನಿವಾಸಿ ಭಾರತೀಯರಿಗೆ ಮಾತ್ರ ಎಂದು ತಿಳಿದ ಕೂಡಲೇ ಸಿಂಗ್ ನಿರಾಶರಾದರು.

ಮಾರ್ಚ್ 8ರಂದು ಭಾಷಣ ಮಾಡಿದ ಮೋದಿ, ಡಿಸೆಂಬರ್ 30, 2016ರೊಳಗೆ ಹಳೆ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದೇ ಇದ್ದವರು ಆರ್‍‍ಬಿಐನ ನಿರ್ದಿಷ್ಟ ಶಾಖೆಗಳ್ಲಿ ಮಾರ್ಚ್ 31, 2017ರ ವರೆಗೆ ನೋಟು  ಬದಲಾಯಿಸಿಕೊಳ್ಳಬಹುದು ಎಂದಿದ್ದರು. ಇದಾದ ನಂತರ ನೋಟು ಬದಲಾವಣೆಯನ್ನು ಡಿಸೆಂಬರ್ 30ರೊಳಗೆ ಮಾಡಬೇಕು ಎಂದು ಮೋದಿ ನಿರ್ಧಾರ ಬದಲಿಸಿದ್ದರು.

ಆದರೆ ಸಿಂಗ್ ಅವರಿಗೆ ಮೋದಿ ಅವರು ನಿರ್ಧಾರ ಬದಲಿಸಿದ ಬಗ್ಗೆ ಗೊತ್ತೇ ಇರಲಿಲ್ಲ!

ಮಾರ್ಚ್ 31ರವರೆಗೆ ನೋಟು ಬದಲಿಸಬಹುದು ಎಂಬ ನಿರ್ಧಾರವನ್ನು ಬದಲಿಸಿದ್ದ ಬಗ್ಗೆ ನನಗೆ ತಿಳಿದಿಲ್ಲ. ಈ ವಿಷಯ ತಿಳಿದಿದ್ದರೆ  ₹1,000 ಬಸ್ ಟಿಕೆಟಿಗೆ ಖರ್ಚು ಮಾಡಿ ನಾನು ಇಲ್ಲಿವರೆಗೆ ಬರುತ್ತಿರಲಿಲ್ಲ ಎಂದಿದ್ದಾರೆ ಸಿಂಗ್. ಇಲ್ಲಿವರೆಗೆ ನೋಟು ಬದಲಾವಣೆ ಯಾಕೆ ಮಾಡಿಲ್ಲ? ಎಂಬ ಪ್ರಶ್ನೆಗೆ ಉತ್ತರವಾಗಿ ತಾನು ಸಿಯಾಚಿನ್‍ನಲ್ಲಿ ಕರ್ತವ್ಯ ನಿರತನಾಗಿದ್ದೆ ಎಂಬುದಕ್ಕೆ ಸಾಕ್ಷ್ಯವನ್ನೂ ಸಿಂಗ್ ತೋರಿಸಿದ್ದಾರೆ.

ಆರ್‍‍ಬಿಐ ಕಚೇರಿಯ ಹೊರಗೆ ಸಿಕ್ಕ ಇನ್ನೊಬ್ಬ ಯೋಧ ಪಂಕಜ್ ಸಿಂಗ್, ಮಾವೋ ಪೀಡಿತ ಜಾರ್ಖಂಡ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಪಂಕಜ್ ಸಿಂಗ್ ಬಳಿ ₹19,000 ಮೌಲ್ಯವಿರುವ  ಹಳೆ ನೋಟುಗಳಿವೆ. ನಾನು ಕರ್ತವ್ಯ ನಿರತನಾಗಿರುವ ಕಾಡುಗಳಲ್ಲಿ ಫೋನ್ ಆಗಲೀ ರೇಡಿಯೋ ಸಿಗ್ನಲ್ ಸಿಗುತ್ತಿಲ್ಲ. ನಮಗೆ ಹೆಲಿಕಾಪ್ಟರ್ ಮೂಲಕವೇ ರೇಷನ್ ಒದಗಿಸಲಾಗುತ್ತದೆ. ಅಲ್ಲಿ ಯಾವುದೇ ಬ್ಯಾಂಕ್‍ಗಳಿಲ್ಲ. ನಮಗೆ ಸುದ್ದಿ ಸಿಗುವುದಾದರೂ ಹೇಗೆ? ಸುದ್ದಿ ಸಿಕ್ಕರೂ ಹಳೆ ನೋಟುಗಳನ್ನು ಬದಲಿಸಲು ರಜೆ ಸಿಗಬೇಕಲ್ಲಾ?

ಸಿಆರ್‍‍ಪಿಎಫ್ ಅಧಿಕಾರಿಯಾದ ರಾಜೇಶ್ ಅವರ ಕತೆಯೂ ಇದೇ ರೀತಿಯದ್ದು.  ಕೊಯಂಬತ್ತೂರಿನಲ್ಲಿ ತರಬೇತಿ ಪಡೆಯುತ್ತಿದ್ದಾಗ ಈತನ ಪತ್ನಿ ಎರಡು ಬಾರಿ ಗರ್ಭಪಾತಕ್ಕೊಳಗಾಗಿದ್ದರು. ಸರ್ಕಾರ ಈ ರೀತಿ ನಿರ್ಧಾರಗಳನ್ನು ಕೈಗೊಳ್ಳುವಾಗ ನಮಗೆ ಸಲಹಾಸೂತ್ರಗಳನ್ನು ನೀಡದೇ ಇರುವುದೇಕೆ? ಸರಿಯಾದ ಸಮಯಕ್ಕೆ ನೋಟು ಬದಲಾವಣೆ ಮಾಡಲು ಸಾಧ್ಯವಾಗದೇ ಇರುವವರಿಗೆ ಸಾಕ್ಷ್ಯ ಒದಗಿಸುವಂತೆ ಏನಾದರೂ ಮಾಡಬಹುದಿತ್ತಲ್ಲವೇ? ಇದು ಸರಿಯೇ? ಅನಿವಾಸಿ ಭಾರತೀಯರ ಲಕ್ಷ ಲಕ್ಷ ದುಡ್ಡಿನ ವಹಿವಾಟು ಮಾಡುತ್ತಾರೆ. ಅವರಿಗೆ ₹10,000 ಅಥವಾ ₹20,000 ನಷ್ಟ ಆಗುವುದು ದೊಡ್ಡ ಹೊಡೆತವೇನೂ ನೀಡುವುದಿಲ್ಲ. ಆದರೆ ನಾವು ₹30,000ಕ್ಕಿಂತ ಕಡಿಮೆ ಸಂಬಳ ಪಡೆಯುತ್ತೇವೆ., ಕೊಯಂಬತ್ತೂರಿನಲ್ಲಿ ನಾನು ತರಬೇತಿ ಪಡೆಯುತ್ತಿದ್ದಾಗ ಗಳಿಸಿದ ₹9000 ಈಗ ನಿರಪಯುಕ್ತವಾಗಿದೆ.

ಹೋಳಿ ಪ್ರಯುಕ್ತ ಮನೆ ಸ್ವಚ್ಛ ಮಾಡುವ ವೇಳೆ ತಲೆದಿಂಬು, ಹಳೆ ಫೋಟೊ, ಗೋಡೆಯ ಸಂದಿಯಲ್ಲಿ ಬಚ್ಚಿಟ್ಟಿದ್ದ ಹಣ ಸಿಕ್ಕಿತ್ತು. ಆ ರೀತಿ ಸಿಕ್ಕಿದ ಹಣವನ್ನು ಬದಲಿಸುವುದಕ್ಕಾಗಿ ಆರ್‍‍ಬಿಐಗೆ ಬಂದವರೂ ಅಲ್ಲಿದ್ದರು.

ಪಂಕಜ್ ಸಿಂಗ್ ಅವರ ಅಪ್ಪ ಸೆಂಟ್ರಲ್  ಬ್ಯಾಂಕ್ ಆಫ್ ಇಂಡಿಯಾದ ಲಾಕರ್‍‍ನಲ್ಲಿರಿಸಿದ್ದ  ₹20,000 ದುಡ್ಡನ್ನು  ಬದಲಿಸುವ ಸಲುವಾಗಿ ಹಲ್ದ್ ವನಿಯಿಂದ ದೆಹಲಿಯಿಂದ ಬಂದಿದ್ದರು. ಸಿಂಗ್ ಅವರ ಅಪ್ಪ ತೀರಿದ ನಂತರ ಅಪ್ಪನ ಬ್ಯಾಂಕ್ ಲಾಕರ್‍‍ನಲ್ಲಿ ದುಡ್ಡು ಇರುವ ಬಗ್ಗೆ ಗೊತ್ತಾಗಿದ್ದು ಕಳೆದ ತಿಂಗಳು.

ಆದರೆ ಆ ದುಡ್ಡನ್ನು  ವರ್ಗಾವಣೆ ಮಾಡುವುದಕ್ಕಾಗಿ ಬ್ಯಾಂಕ್ ವಿವರ, ಅಪ್ಪನ ಮರಣಪತ್ರ ಮತ್ತು ಗುರುತಿನ ಚೀಟಿ ತೆಗೆದುಕೊಂಡು ಬಂದಿರುವ ಸಿಂಗ್, ನನಗೇ ಸೇರಿರುವ ದುಡ್ಡನ್ನು ನನಗೆ ಕೊಡುವುದಕ್ಕೆ ನಾನು ಯಾಕೆ ಆರ್‍‍ಬಿಐಯಲ್ಲಿ ವಿನಂತಿ ಮಾಡಬೇಕು?ಎಂದು ಪ್ರಶ್ನಿಸಿದ್ದಾರೆ.

ಇನ್ನುಳಿದಂತೆ ಆರ್‍‍ಬಿಐ ಬ್ಯಾಂಕ್ ಮುಂದೆ ಸಾಲು ನಿಂತಿದ್ದವರು ಅನಿವಾಸಿ ಭಾರತೀಯರಾಗಿದ್ದರು. ಇಮಿಗ್ರೇಷನ್  ಮತ್ತು  ಕಸ್ಟಮ್ಸ್ ಅಧಿಕಾರಿಗಳು ಹಳೆ ನೋಟುಗಳಿಗೆ ದಾಖಲೆಗಳನ್ನು ನೀಡಲು ನಿರಾಕರಿಸುತ್ತಾರೆ. ಸಹಾಯವಾಣಿಗೆ ಕರೆ ಮಾಡಿದರೆ ಯಾರೊಬ್ಬರೂ ಉತ್ತರಿಸುವುದಿಲ್ಲ. ಆರ್‍‍ಬಿಐ ವೆಬ್‍ಸೈಟ್‍ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿಲ್ಲ. ಪ್ರತಿ ಸಾರಿ ಆರ್‍‍ಬಿಐ ಗೇಟ್ ಬಳಿ ಬಂದಾಗ ಇಲ್ಲಿನ ಅಧಿಕಾರಿಗಳು ಒಂದೊಂದು ದಾಖಲೆಗಳನ್ನು ತರುವಂತೆ ಒತ್ತಾಯಿಸುತ್ತಾರೆ.  ಕಳೆದ ಮೂರು ದಿನಗಳಿಂದ ನಾನಿಲ್ಲಿಗೆ ಬರುತ್ತಿದ್ದೇನೆ ಅಂತಾರೆ ಬಹರೈನ್ ನಿವಾಸಿ ಅಶು ರಂಜನ್.

ಕೆಲವೊಬ್ಬರು ದಲ್ಲಾಳಿಗಳು ಹಳೆ ₹500 ನೋಟು  ಬದಲಿಸುವುದಕ್ಕಾಗಿ ₹100 ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕಳೆದ ಎರಡು ಗಂಟೆಗಳಲ್ಲಿ 5 ಮಂದಿ ದಲ್ಲಾಳಿಗಳು ನನ್ನನ್ನು  ಸಮೀಪಿಸಿದ್ದರು ಎಂದು ₹2,000 ಮೌಲ್ಯದ ಹಳೆ ನೋಟುಗಳನ್ನು ಬದಲಾಯಿಸಲು ಬ್ಯಾಂಕ್‍ಗೆ ಬಂದ ಪ್ರತೀಕ್ ರಂಜನ್ ಎಂಬ ವಿದ್ಯಾರ್ಥಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.