ADVERTISEMENT

ಹಾಜಿ ಅಲಿ ದರ್ಗಾ ಪ್ರವೇಶ ಯತ್ನ ವಿಫಲ

ಫಲಿಸದ ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ಹೋರಾಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST
ಹಾಜಿ ಅಲಿ ದರ್ಗಾ ಪ್ರವೇಶ ನಿರಾಕರಣೆ ವಿರೋಧಿಸಿ ತೃಪ್ತಿ ದೇಸಾಯಿ ಮುಂಬೈನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪಿಟಿಐ ಚಿತ್ರ
ಹಾಜಿ ಅಲಿ ದರ್ಗಾ ಪ್ರವೇಶ ನಿರಾಕರಣೆ ವಿರೋಧಿಸಿ ತೃಪ್ತಿ ದೇಸಾಯಿ ಮುಂಬೈನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಹಿಂದೂ ದೇವಾಲಯಗಳಲ್ಲಿ ಮಹಿಳೆಯರ ಪ್ರವೇಶದ ಹಕ್ಕಿಗಾಗಿ ಹೋರಾಡಿ ಯಶಸ್ವಿಯಾದ ಭೂಮಾತಾ ಬ್ರಿಗೇಡ್‌ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಿಸಲು ಮಾಡಿದ ಯತ್ನ ವಿಫಲವಾಯಿತು.

ದರ್ಗಾ ಸುತ್ತ ಜಮಾಯಿಸಿದ್ದ ಪ್ರತಿಭಟನಾಕಾರರ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂಬ ಕಾರಣಕ್ಕೆ ತೃಪ್ತಿ ಮತ್ತು ಅವರ ಸಂಗಡಿಗರು ದರ್ಗಾ ಪ್ರವೇಶದ್ವಾರದಿಂದ ಮರಳಿದರು. ದರ್ಗಾದ ಒಳಭಾಗವನ್ನು ಪ್ರವೇಶಿಸಲು ಮಹಿಳೆಯರಿಗೂ ಸಮಾನ ಹಕ್ಕಿದೆ ಎಂದು ಪ್ರತಿಪಾದಿಸಲು ತಾವು ಶಾಂತಿಯುತ ಚಳವಳಿ ನಡೆಸಿದ್ದಾಗಿ ತೃಪ್ತಿ ತಿಳಿಸಿದರು.

ಯಾರದೇ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ತಮ್ಮ ಉದ್ದೇಶವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಪೂಜಾ ಸ್ಥಳಗಳಿಗೂ ಪ್ರವೇಶಿಸಲು ಮಹಿಳೆಯರಿಗೆ ಮುಕ್ತ ಅವಕಾಶ ಸಿಗಬೇಕು ಎಂಬುದೇ ತಮ್ಮ ಉದ್ದೇಶ ಎಂದು ಹೇಳಿದರು.

ಬಾಲಿವುಡ್‌ನ ಖ್ಯಾತ ನಟರಾದ ಶಾರುಕ್‌ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರಿಗೆ ಪತ್ರ ಬರೆದು ಲಿಂಗ ಸಮಾನತೆಯ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದ್ದೇನೆ ಎಂದು ಹೇಳಿದರು.

ಎಐಎಂಐಎಂ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರೂ ಭೂಮಾತಾ ಚಳವಳಿಗೆ ವಿರೋಧ ವ್ಯಕ್ತಪಡಿಸಲು ದರ್ಗಾ ಬಳಿ ನೆರೆದಿದ್ದರಿಂದ ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ರಾಜಕೀಯ ಉದ್ದೇಶ:  ತೃಪ್ತಿ ದೇಸಾಯಿ ಅವರು ರಾಜಕೀಯ ಉದ್ದೇಶಕ್ಕಾಗಿ ಈ ಚಳವಳಿ ನಡೆಸಿದ್ದಾರೆ ಎಂದು ಶಿವಸೇನಾ ಮುಖಂಡ ಹಾಜಿ ಅರಾಫತ್ ಶೇಖ್ ಆರೋಪಿಸಿದ್ದಾರೆ.

ಹೈಕೋರ್ಟ್ ಆದೇಶಕ್ಕೆ ಗೌರವ: ಪೂಜಾ ಸ್ಥಳ ಪ್ರವೇಶ ವಿಚಾರದಲ್ಲಿ ಮಹಿಳೆಯರ ಬಗ್ಗೆ ತಾರತಮ್ಯ ಸಲ್ಲ ಎಂಬ ಹೈಕೊರ್ಟ್ ತೀರ್ಪನ್ನು ಸರ್ಕಾರ ಗೌರವಿಸುತ್ತದೆ ಎಂದು ಕಂದಾಯ ಸಚಿವ ಏಕನಾಥ್ ಖಡ್ಸೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.