ADVERTISEMENT

ಹಿಂಸೆಗಿಳಿದ ರೈತರು: ಪೊಲೀಸರಿಗೆ ಗಾಯ

ವಿಮಾನ ನಿಲ್ದಾಣ ನಿರ್ಮಾಣ: ಭೂಸ್ವಾಧೀನಕ್ಕೆ ವಿರೋಧ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಹಿಂಸೆಗಿಳಿದ ರೈತರು: ಪೊಲೀಸರಿಗೆ ಗಾಯ
ಹಿಂಸೆಗಿಳಿದ ರೈತರು: ಪೊಲೀಸರಿಗೆ ಗಾಯ   

ಠಾಣೆ: ಮಹಾರಾಷ್ಟ್ರದ ನೆವಲಿಯಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ರೈತರು ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು, ಹಲವು ವಾಹನಗಳಿಗೆ ಬೆಂಕಿ ಹೆಚ್ಚಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತಾವಿತ ವಿಮಾನ ನಿಲ್ದಾಣದ ಸ್ಥಳ ರಕ್ಷಣಾ ಸಚಿವಾಲಯಕ್ಕೆ ಸೇರಿದ್ದಾಗಿದೆ. ಅದು ರಾಜ್ಯ ಸರ್ಕಾರದ ದಾಖಲೆಗಳಲ್ಲಿ ಸ್ಪಷ್ಟವಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

ADVERTISEMENT

ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನದ ಕೆಲಸವನ್ನು ಕೆಲವು ವರ್ಷಗಳ ಹಿಂದೆಯೇ ಮಹಾರಾಷ್ಟ್ರ ಸರ್ಕಾರ ಆರಂಭಿಸಿತ್ತು. ಆದರೆ ರೈತರ ಪ್ರತಿಭಟನೆಯಿಂದಾಗಿ ನಂತರ ಅದನ್ನು ಕೈಬಿಡಲಾಗಿತ್ತು.

ಮುಂಬೈನಿಂದ ಸುಮಾರು 50 ಕಿ.ಮೀ ದೂರದ ನೆವಲಿಯ ವಿವಿಧ ಸ್ಥಳಗಳಲ್ಲಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು. ಗುಂಪನ್ನು ಭದ್ರತಾ ಸಿಬ್ಬಂದಿ ನಿಯಂತ್ರಿಸಲು ಮುಂದಾದಾಗ ಅವರತ್ತ ರೈತರು ಕಲ್ಲೆಸೆದರು. ರೈತರನ್ನು ಚದುರಿಸುವುದಕ್ಕಾಗಿ ಪೊಲೀಸರು ಪ್ಲಾಸ್ಟಿಕ್ ಗುಂಡು ಹಾರಾಟ ನಡೆಸಿದರು.

ಎರಡನೇ ಮಹಾಯುದ್ಧ ಸಂದರ್ಭದಲ್ಲಿ ವಿಮಾನ ನಿಲ್ದಾಣವಾಗಿ ಬಳಕೆಯಾಗುತ್ತಿದ್ದ ಸ್ಥಳದಲ್ಲಿ ಮತ್ತೆ ವಿಮಾನ ನಿಲ್ದಾಣ ನಿರ್ಮಿಸುವುದಕ್ಕಾಗಿ 1,600 ಎಕರೆ ಜಮೀನು ಸ್ವಾಧೀನಕ್ಕೆ ರಕ್ಷಣಾ ಇಲಾಖೆ ಮುಂದಾಗಿದೆ. ಅದನ್ನು ಪ್ರಶ್ನಿಸಿ ರೈತರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಸ್ಥಳವನ್ನು ರಕ್ಷಣಾ ಇಲಾಖೆಗೆ ನೀಡಿ 1943ರಲ್ಲಿ ಠಾಣೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಈ ಆದೇಶದ ಆಧಾರದಲ್ಲಿ ಈಗ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. 1943ರ ಆದೇಶದ ಸಿಂಧುತ್ವವನ್ನು ರೈತರು ಪ್ರಶ್ನಿಸಿದ್ದಾರೆ.

ರಕ್ಷಣಾ ಸಚಿವಾಲಯದ ಸ್ವಾಧೀನದಲ್ಲಿ ಇರುವ ಸ್ಥಳದ ಸುತ್ತ ಗೋಡೆ ಕಟ್ಟುವ ಕೆಲಸ ನಡೆಯುತ್ತಿದೆ. ಸ್ಥಳ ಇನ್ನಷ್ಟು ಒತ್ತುವರಿಯಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಎಲ್ಲ ರೀತಿಯ ಭದ್ರತೆ ಒದಗಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.