ADVERTISEMENT

ಹುಟ್ಟೂರು, ಮಾವನೂರಿಗೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ: ರೈಲ್ವೆ ಸಚಿವ ಸದಾನಂದಗೌಡರು ತಮ್ಮ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ತಮ್ಮ ಹುಟ್ಟೂರು, ಮಾವನ ಊರು ಹಾಗೂ ಮತ ಕ್ಷೇತ್ರಗಳ ಜನರ ಋಣ ತೀರಿಸುವ ಕೆಲಸ ಮಾಡಿದ್ದಾರೆ.

ಸದಾನಂದಗೌಡರು ಹುಟ್ಟಿದ್ದು ಸುಳ್ಯ ತಾಲೂಕಿನಲ್ಲಿ. 2014– 15ರ ರೈಲ್ವೆ ಬಜೆಟ್‌ನಲ್ಲಿ ಕಾಸರಗೋಡಿನ ಕಾಞಂಗಾಡ, ಪಣತ್ತೂರು ಮತ್ತು ಕಾಣಿಯೂರು ಹೊಸ ರೈಲು ಮಾರ್ಗದ ಸಮೀಕ್ಷೆ ಪ್ರಕಟಿಸಿದ್ದಾರೆ. 

ಪತ್ನಿ ‘ಡಾಟಿ’ ಅವರ ತವರು ಕೊಡಗನ್ನು ಅವರು ಮರೆತಿಲ್ಲ. ಕುಶಾಲನಗರದಿಂದ ಮಡಿಕೇರಿವರೆಗೆ ಹೊಸ ರೈಲು ಮಾರ್ಗದ ಸಮೀಕ್ಷೆ ಕೈಗೊಳ್ಳುವುದಾಗಿ ಹೇಳಿದ್ದಾರೆ. ರೈಲ್ವೆ ಸಚಿವರು ಹೊಸ ಮಾರ್ಗದ ಸಮೀಕ್ಷೆ ಪ್ರಕಟಿಸುತ್ತಿದ್ದಂತೆ ಗಣ್ಯರ ಗ್ಯಾಲರಿಯಲ್ಲಿದ್ದ ಪತ್ನಿ ಮತ್ತು ಪುತ್ರನ ಮುಖದ ಮೇಲೆ ಮುಗುಳ್ನಗೆ ಕಾಣಿಸಿ­ಕೊಂಡಿತು.

  ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ರೈಲ್ವೆ ಸಚಿವರು ಬಯ್ಯಪ್ಪನಹಳ್ಳಿಯಲ್ಲಿ ರೈಲು ತಂಗುದಾಣ (ಟರ್ಮಿನಲ್‌) ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಕೊಡಗು ತಮ್ಮ ಮಾವನ ಮನೆ ಎಂಬ ಕಾರಣಕ್ಕೆ ಹೊಸ ಮಾರ್ಗದ ಸಮೀಕ್ಷೆ ನಡೆಸುತ್ತಿಲ್ಲ. ಹಾಗೆ ಬಯ್ಯಪ್ಪನಹಳ್ಳಿ ತಮ್ಮ ಕ್ಷೇತ್ರ­ವೆಂದು ಟರ್ಮಿನಲ್ ಸ್ಥಾಪನೆಗೆ ಮುಂದಾಗಿಲ್ಲ ಎಂದು ಸದಾನಂದ­ಗೌಡರು ಅನಂತರ ಪತ್ರಿಕಾಗೋಷ್ಠಿಯಲ್ಲಿ ಸಮಜಾಯಿಷಿ ನೀಡಿದರು.

ಬೆಂಗಳೂರು– ಮೈಸೂರು ಮಾರ್ಗವನ್ನು ಮುಂದಿನ ವರ್ಷದ ಮಾರ್ಚ್‌ ಹಾಗೂ ಹಾಸನ– ಮಂಗಳೂರು ಮಾರ್ಗದ ಕಾಮಗಾರಿಯನ್ನು 2016ರ ಮಾರ್ಚ್‌ಗೆ ಮುಗಿಸಲಾಗುವುದು. ಇಷ್ಟು ಹೊತ್ತಿಗೆ ಇವೆರಡು ಮಾರ್ಗಗಳು ಮುಗಿಯಬೇಕಿತ್ತು. ಇನ್ನೂ ವಿಳಂಬವಾಗಲು ಅವಕಾಶ ನೀಡುವುದಿಲ್ಲ. ಈಗಾಗಲೇ ಅಗತ್ಯವಿರುವ ಹಣಕಾಸು
ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಸಚಿವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.