ADVERTISEMENT

ಹೊಸತನಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಳು!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೃದಯ ವಿದ್ರಾವಕ ಘಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST
ಹೊಸತನಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಳು!
ಹೊಸತನಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಳು!   

ಲಖನೌ: ಅವಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಹೊಸತೇನಾದರೂ ಮಾಡಬೇಕು ಎಂಬುದು ಆಕೆಯ ಆಸೆಯಾಗಿತ್ತು. ಅದು ಸಾಹಸಮಯ ಆಗಿರಬೇಕು ಎಂಬುದು ಅವಳ ಅಭಿಲಾಷೆ. ಅದಕ್ಕಾಗಿ ವಿದ್ಯಾರ್ಥಿನಿ ಕಂಡು ಕೊಂಡ ದಾರಿ ಆತ್ಮಹತ್ಯೆ!

ವಿನೂತನವಾಗಿ ಏನಾದರೂ ಮಾಡಬೇಕು ಎಂದುಕೊಂಡ 17 ವರ್ಷದ ಬಾಲಕಿಯೊಬ್ಬಳು  ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅರ್ಚನಾ ಸಿಂಗ್‌ (ಹೆಸರು ಬದಲಾಯಿಸಲಾಗಿದೆ) ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಆಕೆಯದ್ದು ಸ್ಥಿತಿವಂತರ ಕುಟುಂಬ. ಅವಳ ತಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಕಾನ್ಪುರ ಪಟ್ಟಣದ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದ ರೀತಿಯಲ್ಲಿ ಅರ್ಚನಾ ಕಂಡು ಬಂದಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು. ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಅರ್ಚನಾಳ ತಾಯಿ  ತವರು ಮನೆಗೆ ಹೋಗಿದ್ದರು. ತಂದೆ ಕೆಲಸಕ್ಕೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ  ಅರ್ಚನಾ ಬರೆದಿರುವ ಸುದೀರ್ಘ ಪತ್ರ ಆಕೆಯ ಕೊಠಡಿಯಲ್ಲಿ ಪತ್ತೆಯಾಗಿದೆ. ಪತ್ರದಲ್ಲಿ ತನ್ನ ಮೇಲೆ ಪೋಷಕರು, ಕುಟುಂಬ ಸದಸ್ಯರು ತೋರಿಸುತ್ತಿದ್ದ ಪ್ರೀತಿಯನ್ನು ಪ್ರಸ್ತಾಪಿಸಿದ್ದಾಳೆ ಎಂದು ಮೂಲಗಳು ಹೇಳಿವೆ.

‘ನನ್ನ ಸಾವಿಗೆ ಯಾರೂ ಕಾರಣರಲ್ಲ. ನನಗೆ ಯಾವುದೇ ಸಮಸ್ಯೆಗಳಿಲ್ಲ. ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಹೊಸದಾದ ಮತ್ತು ಸಾಹಸಮಯವಾದ  ಕಾರ್ಯ ಮಾಡಬೇಕು ಎಂದು ಆಸೆಯಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅರ್ಚನಾ  ಪತ್ರದಲ್ಲಿ ಬರೆದಿದ್ದಾಳೆ.

ಅವಳು ಯಾಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದನ್ನು ಊಹಿಸಲು ಕುಟುಂಬ ಸದಸ್ಯರಿಗೇ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
‘ಸ್ವತಃ ಸಾವನ್ನು ತಂದುಕೊಳ್ಳಲು ಅವಳಿಗೆ ಯಾವುದೇ ಕಾರಣಗಳಿರಲಿಲ್ಲ. ಆಕೆ ತುಂಬಾ ಸಂತೋಷದಿಂದ ಇದ್ದಳು’ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

ಇದೊಂದು ಆತ್ಮಹತ್ಯೆ ಪ್ರಕರಣವೇ ಹೊರತು ಕೊಲೆಯಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಇದು ಹೊಸ ರೀತಿಯ ಪ್ರಕರಣ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದನ್ನು ತಜ್ಞರು ಪತ್ತೆಹಚ್ಚಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.