ADVERTISEMENT

ಹೊಸ ಇ–ಕಾಮರ್ಸ್‌ ನೀತಿ ಸಾಧ್ಯತೆ

‘ಫ್ಲಿಪ್‌ಕಾರ್ಟ್‌’ ಮಾರಾಟ ಮೇಳದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 19:30 IST
Last Updated 8 ಅಕ್ಟೋಬರ್ 2014, 19:30 IST

ನವದೆಹಲಿ(ಪಿಟಿಐ): ಇ–ಕಾಮರ್ಸ್‌ ತಾಣ ‘ಫ್ಲಿಪ್‌ಕಾರ್ಟ್‌’ನ ಭಾರಿ ರಿಯಾಯಿತಿ ದರ ಮಾರಾಟದ ಬಗ್ಗೆ ವ್ಯಾಪಾರಿ­ಗಳಿಂದ ಹಲವಾರು ದೂರುಗಳು ಬಂದಿದೆ ಹಾಗಾಗಿ ಇ–ಕಾಮರ್ಸ್‌ ವ್ಯಾಪಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಹೊಂದುವ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

‘ಫ್ಲಿಪ್‌ಕಾರ್ಟ್‌’ ಸೋಮವಾರ ನಡೆಸಿದ ‘ಬಿಗ್‌ ಬಿಲಿಯನ್‌ ಡೇ’ ರಿಯಾಯಿತಿ ವ್ಯಾಪಾರದಲ್ಲಿ  ಹಲವಾರು ಉತ್ಪನ್ನಗಳ ರಿಯಾಯಿತಿ ಮಾರಾಟದ ಬಗ್ಗೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ತಗಾದೆ ಎತ್ತಿದ್ದಾರೆ. ಇಂತಹ ರಿಯಾಯಿತಿ ದರದ ಮಾರಾಟಗಳು ಚಿಲ್ಲರೆ ಮಾರುಕಟ್ಟೆಯ ಮೇಲೆ ಅಡ್ಡ­ಪರಿಣಾಮ ಬೀರುವ ಸಂಭವವಿದೆ ಎಂದು ಅವರು ಹೇಳಿದ್ದಾರೆ.

‘ನಮಗೆ ಹಲವು ದೂರುಗಳು ಬಂದಿರುವ ಕಾರಣ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ತಿಳಿಸಿದರು.

ಇ–ಕಾಮರ್ಸ್‌ಗೆ ಪ್ರತ್ಯೇಕ ನೀತಿ ಜಾರಿಗೊಳಿಸುವ ಸಂಭವ­ವಿದೆಯೇ ಎಂದು ಕೇಳಿದಾಗ, ಅದನ್ನೂ ಪರಿಗಣಿಸುವುದಾಗಿ ಹೇಳಿದರು.
‘ಈಗ ಹಲವು ದೂರುಗಳು ಬಂದಿವೆ. ಪರಿಸ್ಥಿತಿಯನ್ನು ಅಧ್ಯಯನ ನಡೆಸುತ್ತೇವೆ. ಪ್ರತ್ಯೇಕ ನೀತಿಯೇ ಜಾರಿಯಾಗಬೇಕೇ ಅಥವಾ ಯಾವುದೇ ರೀತಿಯ ಸ್ಪಷ್ಟೀಕರಣ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ’ ಎಂದು ನಿರ್ಮಲಾ ತಿಳಿಸಿದರು.

‘ಬಿಗ್‌ ಬಿಲಿಯನ್‌ ಡೇ’ ಮಾರಾಟದಲ್ಲಿ 15 ಲಕ್ಷ ಗ್ರಾಹಕರು ಖರೀದಿ ಮಾಡಿದ್ದಾರೆ. ₨600 ಕೋಟಿ ಮೊತ್ತದ ಉತ್ಪನ್ನಗಳು  ಕೇವಲ 10 ಗಂಟೆಗಳ ಅವಧಿಯಲ್ಲಿ ಮಾರಾಟವಾಗಿವೆ ಎಂದು  ‘ಫ್ಲಿಪ್‌ಕಾರ್ಟ್‌’ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.