ADVERTISEMENT

‘ಅಗ್ನಿ-5’ ಖಂಡಾಂತರ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 10:49 IST
Last Updated 31 ಜನವರಿ 2015, 10:49 IST

ಬಾಲ್ ಸೋರ್(ಪಿಟಿಐ): ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಮತ್ತು 5 ಸಾವಿರ ಕಿ.ಮೀ. ದೂರ ಚಿಮ್ಮುವ ಪರಮಾಣು ಸಾಮರ್ಥ್ಯದ ಖಂಡಾಂತರ ಸಮರ ಕ್ಷಿಪಣಿ ‘ಅಗ್ನಿ -5’ ಪರೀಕ್ಷಾರ್ಥ ಉಡಾವಣೆಯನ್ನು ಶನಿವಾರ ಒಡಿಶಾದ ಕರಾವಳಿ ವೀಲ್ಹರ್ಸ್ ದ್ವೀಪದ ಸೇನಾ ನೆಲೆಯಿಂದ ಯಶಸ್ವಿಯಾಗಿ ನಡೆಸಲಾಯಿತು.

‘ಅಗ್ನಿ -5’ ಕ್ಷಿಪಣಿಯು ಐದು ಸಾವಿರ ಕಿ.ಮೀ. ದೂರದವರೆಗೆ ಒಂದು ಟನ್ ತೂಕದ ಪರಮಾಣು ಸಿಡಿತಲೆ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಕ್ಷಿಪಣಿಯ ಯಶಸ್ವಿ ಉಡಾವಣೆಯೊಂದಿಗೆ ಭಾರತ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.

ಒಡಿಶಾದ ಕಡಲತಡಿಯಿಂದ ಬೆಳಿಗ್ಗೆ 8.6ಕ್ಕೆ ಪರೀಕ್ಷಾರ್ಥ ಉಡಾವಣೆಯನ್ನು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಐಟಿಆರ್ ನ ನಿರ್ದೇಶಕ ಎಂ.ವಿ.ಕೆ.ವಿ. ಪ್ರಸಾದ್ ತಿಳಿಸಿದರು.

ಕ್ಷಿಪಣಿ ಬಂದೂಕಿನ ಗುಂಡುಗಳ ರೂಪ ಹೊಂದಿದ್ದು, ಇದನ್ನು ರಸ್ತೆ ಮತ್ತು ರೈಲು ಮಾರ್ಗದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ರಾಷ್ಟ್ರ ರಕ್ಷಣೆಯಲ್ಲಿ ಶತ್ರುಗಳ ದಾಳಿ ತಡೆಯಲು ಮೇಲ್ಮೈಯಿಂದ ಮೇಲ್ಮೈಗೆಗೆ ಚಿಮ್ಮುವ ಕ್ಷಿಪಣಿ ಅತ್ಯುಪಯುಕ್ತವಾಗಿದೆ ಎಂದು ಸೇನಾ ಅಧಿಕಾರಿಗಲು ವಿವರಿಸಿದ್ದಾರೆ.

ಅಗ್ನಿ–5 ಕ್ಷಿಪಣಿ ಒಂದು ಟನ್ ಭಾರದ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ ಎಂದು ಅವರು ವಿವರಿಸಿದ್ದಾರೆ.

‘ಅಗ್ನಿ -5’ ಪರೀಕ್ಷಾರ್ಥ ಉಡಾವಣೆಯ ಯಶಸ್ಸು ವಿಜ್ಞಾನಿಗಳ ಗೆಲುವು ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರದ ಅಮೂಲ್ಯ ಸಾಧನೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಗ್ನಿ ಕ್ಷಿಪಣಿ ನಿರ್ಮಾಣ ತಂಡಕ್ಕೆ ಅಭಿನಂದಿಸಿರುವ ವಾಯು ಪಡೆಯ ಮುಖ್ಯಸ್ಥ ಅನೂಪ್ ರಾಹ ಅವರು, ಇದು ಅತ್ಯುನ್ನತ ಸಾಧನೆ ಎಂದು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.