ADVERTISEMENT

‘ಆದರ್ಶ್‌’ ಕೆಡವಲು ಆದೇಶ

ಪರಿಸರ ಸಚಿವಾಲಯಕ್ಕೆ ಬಾಂಬೆ ಹೈಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಆದರ್ಶ್‌ ಸೊಸೈಟಿ ಕಟ್ಟಡ
ಆದರ್ಶ್‌ ಸೊಸೈಟಿ ಕಟ್ಟಡ   

ಮುಂಬೈ: ಭ್ರಷ್ಟಾಚಾರದ ವಿರುದ್ಧ ಬಲವಾದ ಸಂದೇಶ ನೀಡಿರುವ ಬಾಂಬೆ ಹೈಕೋರ್ಟ್‌, ಮಹಾರಾಷ್ಟ್ರದ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದ 31 ಅಂತಸ್ತಿನ ಆದರ್ಶ್‌ ಅಪಾರ್ಟ್‌ಮೆಂಟನ್ನು (ಆದರ್ಶ್‌ ಹೌಸಿಂಗ್‌ ಸೊಸೈಟಿ ಕಟ್ಟಡ) ನೆಲಸಮ ಮಾಡಲು ಶುಕ್ರವಾರ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಆದೇಶಿಸಿದೆ.

‘ಕಾನೂನುಬಾಹಿರವಾಗಿ ನಿರ್ಮಿಸಿದ ಅನಧಿಕೃತ ಅಪಾರ್ಟ್‌ಮೆಂಟ್‌ ಇದು’ ಎಂದಿದ್ದ ಪರಿಸರ ಸಚಿವಾಲಯ 2011ರ ಜನವರಿ 16ರಂದು ಕಟ್ಟಡ ಕೆಡವಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆದರ್ಶ್‌ ಸೊಸೈಟಿ ಸದಸ್ಯರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾಯಮೂರ್ತಿಗಳಾದ ಆರ್‌.ವಿ. ಮೋರೆ ಮತ್ತು ಆರ್‌.ಜಿ. ಕೇಟ್ಕರ್‌ ಅವರಿದ್ದ ವಿಭಾಗೀಯ ಪೀಠ ಪರಿಸರ ಸಚಿವಾಲಯದ ಆದೇಶವನ್ನು ಎತ್ತಿಹಿಡಿದಿದೆ. ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ (ಆದರ್ಶ್‌ ಸೊಸೈಟಿ) 12 ವಾರಗಳ ಅವಕಾಶ ನೀಡಿದೆ.

‘ಆದರ್ಶ್‌ ಸೊಸೈಟಿ ಕಟ್ಟಡದ ನಿರ್ಮಾಣದಲ್ಲಿ ಅವ್ಯವಹಾರ ಮತ್ತು ಅಧಿಕಾರದ ದುರ್ಬಳಕೆಯಾಗಿದೆ. ಈ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಕಾರಣಿಗಳು, ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಅವರ ವಿರುದ್ಧ ಸಿವಿಲ್‌ ಮತ್ತು ಕ್ರಿಮಿನಲ್‌ ವಿಚಾರಣೆ ಆರಂಭಿಸುವುದನ್ನು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಪರಿಗಣಿಸಬೇಕು’ ಎಂದು ಪೀಠ ಹೇಳಿತು.

ಇಲಾಖಾ ತನಿಖೆಗೆ ಸೂಚನೆ: ಕಳಂಕಿತ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಕೈಗೆತ್ತಿಕೊಳ್ಳುವಂತೆಯೂ ಪೀಠವು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು.

‘ಶಿಸ್ತುಕ್ರಮ ಪ್ರಾಧಿಕಾರವು ಹೈಕೋರ್ಟ್‌ ತೀರ್ಪಿನ ಪ್ರಭಾವಕ್ಕೆ ಒಳಗಾಗದೆಯೇ ಅಧಿಕಾರಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಿ’ ಎಂದು ಹೇಳಿತು. 

ಪರಿಸರ ಸಚಿವಾಲಯದ ನಿರ್ದೇಶಕ ಭರತ್‌ ಭೂಷಣ್‌, ಸಲಹೆಗಾರ್ತಿ ನಳಿನಿ ಭಟ್‌ ಸೇರಿದಂತೆ ಆರು ಪ್ರತಿವಾದಿಗಳಿಗೆ ತಲಾ ₹ 1 ಲಕ್ಷ ನೀಡುವಂತೆ ಆದರ್ಶ್‌ ಸೊಸೈಟಿಗೆ ಹೈಕೋರ್ಟ್‌ ಆದೇಶಿಸಿದೆ.

ನ್ಯಾಷನಲ್‌ ಅಲಯನ್ಸ್‌ ಆಫ್‌ ಪೀಪಲ್ಸ್‌ ಮೂವ್‌ಮೆಂಟ್‌ನ ಸದಸ್ಯ ಸಿಮ್‌ಪ್ರೀತ್‌ ಸಿಂಗ್‌ ಅಲ್ಲದೆ ಪ್ರವೀಣ್‌ ವಾಟೆಗಾಂವ್ಕರ್‌ ಮತ್ತು ಸಂತೋಷ್‌ ದಾಂಡ್ಕರ್‌ ಎಂಬವರು ಆದರ್ಶ್‌ ಸೊಸೈಟಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಕಾರ್ಗಿಲ್‌ ಯೋಧರು ಮತ್ತು ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಸೈನಿಕರ ವಿಧವೆಯರಿಗೆ ವಸತಿ ಕಲ್ಪಿಸಲು ಆರು ಮಹಡಿಯ ಕಟ್ಟಡ ನಿರ್ಮಿಸುವುದು ಆದರ್ಶ್‌ ಹೌಸಿಂಗ್‌ ಸೊಸೈಟಿಯ  ಉದ್ದೇಶವಾಗಿತ್ತು. ಆದರೆ ನಿಯಮ ಉಲ್ಲಂಘಿಸಿ 31 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು.

ಈ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ಕಾರಣ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಅಶೋಕ್‌ ಚವಾಣ್‌ ರಾಜೀನಾಮೆ ನೀಡಿದ್ದರು.

‘ತಮ್ಮ ಸಂಬಂಧಿಕರಿಗೆ ಫ್ಲ್ಯಾಟ್‌ ದೊರಕಿಸಿಕೊಡುವ ಉದ್ದೇಶದಿಂದ ಚವಾಣ್‌ ಅವರು ಆರು ಅಂತಸ್ತಿನ ಬದಲು ಇನ್ನಷ್ಟು ಮಹಡಿಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದರು’ ಎಂದು ಸಿಬಿಐ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.