ADVERTISEMENT

‘ಕಭಿ ಖುಷಿ, ಕಭಿ ಗಮ್’ನ ಆದೇಶ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 9:09 IST
Last Updated 5 ಸೆಪ್ಟೆಂಬರ್ 2015, 9:09 IST

ಮುಂಬೈ (ಪಿಟಿಐ/ಐಎಎನ್ಎಸ್): ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ಆದೇಶ್ ಶ್ರೀವಾತ್ಸವ ಅವರು ಶನಿವಾರ ನಸುಕಿನ 12.30ರ ವೇಳೆಗೆ ವಿಧಿವಶರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ವಿಜೇತಾ ಪಂಡಿತ್ ಹಾಗೂ ಪುತ್ರರಾದ ಅನಿವೇಶ ಹಾಗೂ ಅವಿತೇಶ್ ಅವರನ್ನು ಅಗಲಿದ್ದಾರೆ.

ಕಳೆದ 40 ದಿನಗಳಿಂದ ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಆದೇಶ್ ಅವರ ಇಂದು ನಸುಕಿನಲ್ಲಿ ನಿಧನರಾದರು ಎಂದು ಡಾ. ರಾಮ್ ನರೇನ್ ಅವರು ತಿಳಿಸಿದ್ದಾರೆ.

ADVERTISEMENT

ಅಂತ್ಯ ಸಂಸ್ಕಾರ: ಒಶಿವರಾದಲ್ಲಿರುವ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಿತು.

ಪರಿಚಯ: 1966ರ ಸೆಪ್ಟೆಂಬರ್‌ 4ರಂದು ಮಧ್ಯಪ್ರದೇಶದ ಜಬಲಪುರದಲ್ಲಿ ಜನನ. ಪತ್ನಿ ವಿಜೇತಾ. ಇಬ್ಬರು ಮಕ್ಕಳು–ಅನಿವೇಶ ಹಾಗೂ ಅವಿತೇಶ.

‘ಚಲ್ತೆ ಚಲ್ತೆ’, ‘ಬಾಬೂಲ್’, ‘ಬಾಗ್ಬಾನ್‌’, ‘ಕಭಿ ಖುಷಿ, ಕಭಿ ಗಮ್’ ಹಾಗೂ ‘ರಾಜನೀತಿ’ ಸೇರಿದಂತೆ 100ಕ್ಕೂ ಹೆಚ್ಚು ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಶ್ರೀವಾತ್ಸವ್‌ ಅವರು ಹಲವು ಗೀತೆಗಳಿಗೆ ದನಿಯಾಗಿದ್ದರು.

ಈ ಮೊದಲು ಕೂಡ ಶ್ರೀವಾತ್ಸವ್ ಅವರು ಕ್ಯಾನ್ಸರ್‌ಗೆ ಕಂಗೆಟ್ಟಿದ್ದರು. ಆದರೂ ಅದರ ವಿರುದ್ಧ ಜಯಿಸಿದ್ದರು. ಮರಳಿ ಬಂದ ಕ್ಯಾನ್ಸರ್‌ ಜತೆಗಿನ ಸುದೀರ್ಘ ಹೋರಾಟದಲ್ಲಿ ಈಬಾರಿ ಅವರು ಸೋಲು ಕಂಡರು.

ಶ್ರೀವಾತ್ಸವ್‌ ಅವರು 1993ರಲ್ಲಿ ‘ಕನ್ಯಾದಾನ’ ಚಿತ್ರಕ್ಕೆ ಕೆಲಸ ಮಾಡಿದರು. ಅದು ಅವರ ಮೊದಲ ಚಿತ್ರ. ಆದರೆ ಕಾರಣಾಂತರಗಳಿಂದ ತೆರೆಕಾಣಲಿಲ್ಲ. ‘ಆವೊ ಪ್ಯಾರ್‌ ಕರೇಂ’ ಚಿತ್ರದ ‘ಹಾತೋ ಮೇಂ ಆ ಗಯಾ ಜೋ...’ ಗೀತೆ ಜನಪ್ರಿಯತೆ ತಂದು ಕೊಟ್ಟಿತು.

ಬಚ್ಚನ್ ಅವರ ಆಪ್ತರು: ಶ್ರೀವಾತ್ಸವ್ ಅವರು ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಆಪ್ತರಲ್ಲೊಬ್ಬರು. ನಿಯಮಿತವಾಗಿ ಫೋನ್‌ ಮೂಲಕ ಬಚ್ಚನ್ ಅವರು ಆರೋಗ್ಯ ವಿಚಾರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.