ADVERTISEMENT

‘ಕಾಶ್ಮೀರಿಗರು ಹಿಂಸೆಗೆ ಉತ್ತರ ನೀಡಿದ್ದಾರೆ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST

ಬಟ್ಟಲ್‌ ಬಲಿಯನ್‌ (ಉಧಂಪುರ), (ಪಿಟಿಐ): ಜಮ್ಮು–ಕಾಶ್ಮೀರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾ­ಯಿ­ಸುವ ಮೂಲಕ ಹಿಂಸೆಯನ್ನು ಧಿಕ್ಕಿರಿಸಿ ಜನತಂತ್ರದ ಮೇಲಿನ ತಮ್ಮ ನಂಬಿಕೆ­ಯನ್ನು ಪ್ರದರ್ಶಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದ ಚುನಾ­ವಣಾ ಪ್ರಚಾರಸಭೆಯಲ್ಲಿ  ಭಾಗವ­ಹಿಸಿದ್ದ ಅವರು, ‘ಅಭಿವೃದ್ಧಿ ಕೊರತೆ­ಯಿಂದಾಗಿ 30 ವರ್ಷ­ಗಳಿಂದ ರಾಜ್ಯವು ನಿಂತ ನೀರಾಗಿತ್ತು. ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್‌, ಕಾಂಗ್ರೆಸ್‌ ಹಾಗೂ ಪಿಡಿಪಿ ಜನರನ್ನು ಭಾವ­ನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದಲ್ಲದೇ ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯವನ್ನು ಲೂಟಿ ಮಾಡಿವೆ’ ಎಂದು ಆರೋಪಿಸಿದರು.

ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದವರನ್ನು ತರಾಟೆಗೆ ತೆಗೆ­ದು­ಕೊಂಡ ಅವರು, ‘ಇವರು ಬಂದೂಕಿನ ಮೂಲಕ ಮತ­ದಾನದ ಹಕ್ಕುಗಳನ್ನು ದಮನಿಸುತ್ತಿದ್ದಾರೆ. ಇದೇ ಮೊದಲ ಬಾರಿ ರಾಜ್ಯದ ಜನ ಹೆಚ್ಚಿನ ಸಂಖ್ಯೆ­ಯಲ್ಲಿ ಮತದಾನ ಮಾಡುವ ಮೂಲಕ ಹಿಂಸೆಗೆ ಉತ್ತರ ನೀಡಿದ್ದಾರೆ’ ಎಂದರು.

‘ನಾನು ಎರಡನೇ ಬಾರಿ ಇಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿ­ದ್ದೇನೆ. ಮೊದಲ ಬಾರಿ ಕಿಶ್ತ್ವಾರ್‌ನ ಚೆನಾಬ್‌್ ಪ್ರದೇಶಕ್ಕೆ ಹೋಗಿದ್ದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಜನರನ್ನು  ಅಭಿನಂದಿ­ಸುತ್ತೇನೆ. ಅವರು ಜನತಂತ್ರವನ್ನು ಗೆಲ್ಲಿಸಿದ್ದಾರೆ. ಇಲ್ಲಿನ ಜನರ ಬಗ್ಗೆ ಇಡೀ ದೇಶ ಹೆಮ್ಮೆಪಟ್ಟುಕೊಳ್ಳುತ್ತಿದೆ’ ಎಂದರು.

ಕದನವಿರಾಮ ಉಲ್ಲಂಘನೆ
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ ಶುಕ್ರವಾರ ಪಾಕಿಸ್ತಾನ ಜಮ್ಮುವಿನ ಅಂತರ­ರಾಷ್ಟ್ರೀಯ ಗಡಿರೇಖೆ ಬಳಿ  ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂ­ಘಿಸಿದೆ. ಆದರೆ, ಭಾರತ ಈ ದಾಳಿಗೆ ಪ್ರತಿ­ದಾಳಿ ನಡೆ­ಸಿಲ್ಲ. ಘಟನೆಯಲ್ಲಿ ಯಾವುದೇ ಸಾವು, ನೋವಿನ ವರದಿಯಾಗಿಲ್ಲ ಎಂದು ಗಡಿಭದ್ರತಾ ಪಡೆ ತಿಳಿಸಿದೆ.

12 ಜನರ ಸಾವು: ಅರ್ನಿಯಾದಲ್ಲಿ ಅಂತರರಾಷ್ಟ್ರೀಯ ಗಡಿ ಬಳಿ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗ ಶುಕ್ರವಾರ ಬೆಳಿಗ್ಗೆ ಅಂತ್ಯಗೊಂಡಿದ್ದು,  ನಾಲ್ಕು ಜನ ಉಗ್ರರು, ಐವರು ನಾಗರಿಕರು ಹಾಗೂ ಮೂರು ಜನ ಸೈನಿಕರು ಸೇರಿ ಒಟ್ಟು 12 ಜನ ಮೃತಪಟ್ಟಿದ್ದಾರೆ.

ನ್ಯಾಯಸಮ್ಮತ ಮತದಾನ: ಶೇ 52ರಷ್ಟು ಜನರ ನಂಬಿಕೆ
ಶ್ರೀನಗರ (ಪಿಟಿಐ):
ಜಮ್ಮು–ಕಾಶ್ಮೀರದ ವಿಧಾನಸಭೆ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುತ್ತಿದೆ ಎಂದು ಶೇ 52ಕ್ಕಿಂತಲೂ ಹೆಚ್ಚಿನ ಜನರು ನಂಬಿರುವುದಾಗಿ ಪಾಕಿಸ್ತಾನದ ‘ಡಾನ್‌್’ ಪತ್ರಿಕೆ ನಡೆಸಿದ ಅಂತರ್ಜಾಲ ಸಮೀಕ್ಷೆಯಿಂದ ತಿಳಿದುಬಂದಿದೆ.

ಸುಮಾರು 8,000 ಮಂದಿಯನ್ನು  ಸಮೀಕ್ಷೆಗೆ ಒಳಪಡಿಸಲಾಗಿತ್ತು.  ಕಾಶ್ಮೀರ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿದೆಯೇ? ಎಂಬ ಪ್ರಶ್ನೆಗೆ ಶೇ 52.54ರಷ್ಟು ಮಂದಿ ‘ಹೌದು’ ಎಂದು ಉತ್ತರ ನೀಡಿದ್ದಾರೆ. ಉಳಿದವರು ‘ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.  ರಾಜ್ಯದಲ್ಲಿ ನ.25ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆ ಮತದಾನವಾದ ಬೆನ್ನಲ್ಲಿಯೇ ಈ ಸಮೀಕ್ಷೆ ನಡೆಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT