ADVERTISEMENT

‘ಗೋಡ್ಸೆ ದೇವಸ್ಥಾನ’: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST

ಮೀರಠ್‌ (ಪಿಟಿಐ): ಅಖಿಲ ಭಾರ­ತೀಯ ಹಿಂದು ಮಹಾಸಭಾ ಕಾರ್ಯ­ಕರ್ತ­ನೊಬ್ಬ ಮಹಾತ್ಮ ಗಾಂಧಿಯವ­ರನ್ನು ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆಗೆ ಸಮರ್ಪಿಸಲೆಂದು ದೇವ­ಸ್ಥಾನ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ ಪ್ರಕರಣಕ್ಕೆ ಸಂಬಂ­ಧಿಸಿದಂತೆ  ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಚಾರ್ಯ ಮದನ್‌ ಅವರು ಬುಧವಾರ ಇಲ್ಲಿನ ಶಾರದಾ ರಸ್ತೆಯಲ್ಲಿ ದೇವಸ್ಥಾನಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ಈ ಸಂದರ್ಭದಲ್ಲಿ ಗೋಡ್ಸೆ ನಿಜ­ವಾದ ರಾಷ್ಟ್ರ ಭಕ್ತ ಎಂದು ಪ್ರಶಂಸಿಸಿದ ಮದನ್‌ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂದಕ್ಕೆ ಪಡೆಯುವ ಮತ್ತು ರಾಮ ಜನ್ಮಭೂಮಿ ವಿಚಾರವಾಗಿ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳ­ದಿರುವುದರ ವಿರುದ್ಧ ಹರಿ ಹಾಯ್ದರು.

‘ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್‌ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ನವನೀತ್‌ ಸಿಂಗ್‌ ಚಾಹಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

5 ಕಡೆ ಗೋಡ್ಸೆ ಪ್ರತಿಮೆ?
ರಾಣೆಬೆನ್ನೂರು (ಹಾವೇರಿ ಜಿಲ್ಲೆ):
‘ನಾಥೂರಾಮ್‌ ಗೋಡ್ಸೆ  ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು’ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಗುರುವಾರ ಇಲ್ಲಿ ಆಗ್ರಹಿಸಿದರು.

‘ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ, ಮಂಗಳೂರು ಹಾಗೂ ರಾಣೆಬೆನ್ನೂರಿನಲ್ಲಿ ಗೋಡ್ಸೆ ಮೂರ್ತಿ ಪ್ರತಿಷ್ಠಾಪಿಸಲು ಅಖಿಲ ಭಾರತ ಹಿಂದೂ ಮಹಾಸಭಾ ನಿರ್ಧರಿಸಿದೆ. ಜನವರಿ ೩೦ರಂದು ಗೋಡ್ಸೆ ನಮನ ಹಾಗೂ ಜಯಂತ್ಯುತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT