ADVERTISEMENT

‘ಚುನಾವಣಾ ಭ್ರಷ್ಟಾಚಾರದಲ್ಲಿ ತಮಿಳುನಾಡಿಗೆ ಅಗ್ರಸ್ಥಾನ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 12:48 IST
Last Updated 5 ಮಾರ್ಚ್ 2015, 12:48 IST

ಕೊಯಂಬತ್ತೂರು (ಪಿಟಿಐ): ಚುನಾವಣಾ ಭ್ರಷ್ಟಾಚಾರದಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಷಾ, ಚುನಾವಣೆಯ ವೇಳೆ ಹಣದ ಹರಿವಿನ ಮೇಲೆ ಕಣ್ಣಿಡಲು ಯತ್ನಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಕೋರಿದ್ದಾರೆ.

ಪಕ್ಷದ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಗುರುವಾರ ಷಾ ಅವರು ಮಾತನಾಡಿದರು.

‘ಚುನಾವಣೆಗಳಲ್ಲಿ ಹಣವು ಪ್ರಮುಖ ಪಾತ್ರ ವಹಿಸಬಲ್ಲ ರಾಜ್ಯಗಳ ಪಟ್ಟಿಯಲ್ಲಿ ದೇಶದಲ್ಲಿಯೇ ತಮಿಳುನಾಡು ಅಗ್ರಸ್ಥಾನದಲ್ಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿಯು ಬೂತ್ ಮಟ್ಟದಲ್ಲಿ ಬಲಗೊಳ್ಳಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಿ ಹಣ ಪಡೆಯುವುದನ್ನು ತಡೆಯಲು ಇದು ಅಗತ್ಯ’ ಎಂದು ಷಾ ಪ್ರತಿಪಾದಿಸಿದ್ದಾರೆ.

ADVERTISEMENT

ಸುದ್ದಿಗಾರರಿಗೆ ಹಾಗೂ ಸಾರ್ವಜನಿಕರಿಗೆ ಸಭೆಗೆ ಪ್ರವೇಶ ನಿರಾಕರಿಸಲಾಗಿತ್ತು.

ತಮಿಳುನಾಡಿನಲ್ಲಿ ಬದಲಾವಣೆಗಾಗಿ ಬಿಜೆಪಿಯನ್ನು ಬಲಗೊಳಿಸುವ ಅಗತ್ಯವಿದೆ. ಬಿಜೆಪಿ ಮಾತ್ರವೇ ಭ್ರಷ್ಟಾಚಾರವನ್ನು ತಡೆಯಬಲ್ಲದು ಎಂದು ಷಾ ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಯ ರಾಷ್ಟ್ರೀಯ ಸದಸ್ಯತ್ವ ಅಭಿಯಾನದಲ್ಲಿ ಸುಮಾರು 6.2 ಕೋಟಿ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಮಾರ್ಚ್ 31ರ ವೇಳೆಗೆ 10 ಕೋಟಿ ಹೊಸ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಗುರಿಯನ್ನು ಪಕ್ಷವು ಮುಂದಿನ 25 ದಿನಗಳಲ್ಲಿ ಸಾಧಿಸಲಿದೆ ಎಂದೂ ಷಾ ಹೇಳಿರುವುದಾಗಿ ಮೂಲಗಳು ಹೇಳಿವೆ.

ತಮಿಳುನಾಡಿನಲ್ಲಿ ಉದ್ದೇಶಿತ 60 ಲಕ್ಷ ಸದಸ್ಯರ ಗುರಿಯ ಪೈಕಿ 22 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.