ADVERTISEMENT

‘ತಪ್ಪಿತಸ್ಥರನ್ನು ಪಾಕ್‌ ಶೀಘ್ರ ಶಿಕ್ಷಿಸಲಿ’

‘ಮುಂಬೈ ದಾಳಿ’ ಸ್ಮರಣಾರ್ಥ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:57 IST
Last Updated 26 ನವೆಂಬರ್ 2014, 19:57 IST

ಮುಂಬೈ/ನವದೆಹಲಿ (ಪಿಟಿಐ): ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ವಿಚಾ­ರಣೆ­ ಪಾಕಿ­ಸ್ತಾನದಲ್ಲಿ ಬಹಳ ನಿಧಾ­ನಗತಿ ­ಸಾಗಿ­ರುವ ಬಗ್ಗೆ ಬುಧವಾರ ಇಲ್ಲಿ ತೀವ್ರ ಕಳವಳ ವ್ಯಕ್ತ­­­ಪಡಿಸಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಆದಷ್ಟು ಬೇಗ ತಪ್ಪಿ­ತಸ್ಥರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

2008ರ ನವೆಂಬರ್‌ 26ರಂದು ನಡೆದ ಈ ದಾಳಿಯ ಆರನೇ ವರ್ಷಾ­ಚರಣೆ ಪ್ರಯುಕ್ತ ಪ್ರಾಣ ಕಳೆದು­ಕೊಂಡ­ಯೋಧರು, ಪೊಲೀಸರು, ನಾಗ­ರಿ­ಕರು ಮತ್ತಿತರರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತ­ನಾಡಿದ ಅವರು, ನೆರೆಯ ರಾಷ್ಟ್ರದಲ್ಲಿ ಪ್ರಕರಣದ ವಿಚಾ­ರಣೆ ಆದ್ಯತೆಯೊಂದಿಗೆ ನಡೆಯ­ಬೇಕು ಎಂದು ಆಗ್ರಹಿಸಿದರು.

ಪೊಲೀಸ್‌ ಪಡೆಯನ್ನು ಬಲಗೊಳಿಸಲು ಮತ್ತು ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು ಇದು ಮೊದಲ ಆದ್ಯತೆ ಆಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದರು. ಮಹಾರಾಷ್ಟ್ರ ಸರ್ಕಾರವು ದಾಳಿಯ ಬಗ್ಗೆ ತನಿಖೆ ನಡೆಸಿದ ರಾಮ್‌ ಪ್ರಧಾನ್‌ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದೆ.

ಇಲ್ಲಿನ ಪೊಲೀಸ್‌ ಸ್ಮಾರಕಕ್ಕೆ ಶ್ರದ್ಧಾಂ­ಜಲಿ ಸಲ್ಲಿಸಿದ ನಂತರ ರಾಜ್ಯದ ಹಿರಿಯ ಸಚಿವ ವಿನೋದ್‌ ತಾವಡೆ ಈ ವಿಷಯ ವನ್ನು ಸುದ್ದಿಗಾರರಿಗೆ ತಿಳಿಸಿದರು. ಉಗ್ರರು ದಾಳಿಗೆ ಗುರಿಯಾಗಿಸಿ­ಕೊಂ­ಡಿದ್ದ ಮುಂಬೈನ ಹೋಟೆಲ್‌ ತಾಜ್‌­ಮಹಲ್‌ ಪ್ಯಾಲೆಸ್‌,  ನಾರಿಮನ್‌ ಹೌಸ್‌ ಸೇರಿದಂತೆ ವಿವಿಧೆಡೆ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸಲಾಗಿತ್ತು.

ಲಷ್ಕರ್‌ ಎ ತಯಬಾಗೆ ಸೇರಿದ 10 ಮಂದಿ ಉಗ್ರರು ಮುಂಬೈನ ವಿವಿಧೆಡೆ ನಡೆಸಿದ್ದ ದಾಳಿಯಲ್ಲಿ 166 ಜನ ಸತ್ತು ಸುಮಾರು 400 ಮಂದಿ ಗಾಯಗೊಂಡಿದ್ದರು. ಉಗ್ರರ ವಿರುದ್ಧ ನಾಲ್ಕು ದಿನ­ಗಳ­ವರೆಗೆ ನಡೆದ ಕಾರ್ಯಾಚರಣೆ­ಯಲ್ಲಿ 9 ಉಗ್ರರು ಹತರಾಗಿದ್ದರು. ಮತ್ತೊಬ್ಬ ಉಗ್ರ ಅಜ್ಮಲ್‌ ಕಸಬ್‌ನನ್ನು ಬಂಧಿಸಿ ನಂತರ 2012ರಲ್ಲಿ ಪುಣೆಯ ಯರ­ವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಮುಂಬೈ ದಾಳಿಯಲ್ಲಿ ಆರೋಪಿ­ಗಳಾ­ಗಿರುವ 7 ಮಂದಿ ವಿರುದ್ಧ ಪಾಕಿಸ್ತಾನದ ಭಯೋತ್ಪಾದನಾ ತಡೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ಏಳು ಮಂದಿಯಲ್ಲಿ ಲಷ್ಕರ್‌ ಎ ತಯಬಾದ ಕಮಾಂಡರ್‌ ಲಖ್ವಿ ಕೂಡ ಸೇರಿದ್ದಾನೆ.

ಇಂಧನ ಕೊರತೆ: ಗಸ್ತು ನಿಲ್ಲಿಸಿದ ಬೋಟ್‌ಗಳು
ಮುಂಬೈ (ಪಿಟಿಐ):
ಮಹಾರಾಷ್ಟ್ರದ ಕರಾವಳಿಯಲ್ಲಿ ಗಸ್ತು ತಿರುಗುವ 72 ಸ್ಪೀಡ್‌ ಬೋಟ್‌ಗಳು ಇಂಧನ ಕೊರತೆ ಕಾರಣ ಲಂಗರು ಹಾಕಿವೆ. ಇದರಿಂದ ಗಸ್ತು ಕಾರ್ಯಕ್ಕೆ ಅಡಚಣೆಯಾಗಿದೆ. ಮುಂಬೈ ಮೇಲಿನ ದಾಳಿಯ ನಂತರ ಕರಾವಳಿಯಲ್ಲಿ ಗಸ್ತು ಹೆಚ್ಚಿಸುವ ಸಲುವಾಗಿ ಮಹಾರಾಷ್ಟ್ರ ಪೊಲೀಸ್‌  ಇಲಾಖೆ ಈ ಬೋಟ್‌ಗಳನ್ನು 2010ರಲ್ಲಿ ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT