ADVERTISEMENT

‘ದೀದಿ’ ಪರ ಮುಸ್ಲಿಂ ಮತಗಳ ಧ್ರುವೀಕರಣ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:30 IST
Last Updated 25 ಮೇ 2014, 19:30 IST

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಇತ್ತೀಚಿನ ವರ್ಷ­ಗಳಲ್ಲಿ ಗೆಲುವಿನ ರುಚಿಯನ್ನೇನೋ ಕಂಡಿದೆ. ಆದರೂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಶೇ 28ರಷ್ಟಿರುವ ಮುಸ್ಲಿಂ ಮತದಾರರ ಬಹುಪಾಲು ಬೆಂಬಲವನ್ನು ಗಳಿಸುವ ಮೂಲಕ ಮೋದಿ ಅವರ ನಾಗಾಲೋಟಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ.

42 ಕ್ಷೇತ್ರಗಳ ಪೈಕಿ 34ನ್ನು ಗೆದ್ದಿರುವ ಟಿಎಂಸಿ 39.4ರಷ್ಟು ಮತದಾರರ ಬೆಂಬಲ ಪಡೆದಿದೆ. ಶೇ 9ರಷ್ಟು ಮತ ಗಳಿಸಿರುವ ಕಾಂಗ್ರೆಸ್‌ 4 ಸ್ಥಾನಗಳಲ್ಲಿ ಗೆದ್ದರೆ, ಶೇ 23ರಷ್ಟು ಮತಗಳಿಸಿದ ಸಿಪಿಎಂ ಕೇವಲ ಎರಡು ಕಡೆ ಗೆಲುವು ಕಂಡು ಚುನಾವಣಾ ಇತಿಹಾಸದಲ್ಲೇ ಅತ್ಯಂತ ದುರ್ಬಲ ಸಾಧನೆ ತೋರಿತು.

ರಾಜ್ಯ ರಾಜಕೀಯದಲ್ಲಿ ಅಪ್ರಸ್ತುತವೆಂದೇ ಉಪೇಕ್ಷೆಗೆ ಗುರಿಯಾಗಿದ್ದ ಬಿಜೆಪಿ ಶೇ 17ರಷ್ಟು ಮತ ಗಳಿಕೆಯೊಂದಿಗೆ ಅಚ್ಚರಿಯ ಸಾಧನೆ ಮಾಡಿತಲ್ಲದೆ, ಎರಡು ಸ್ಥಾನಗಳನ್ನೂ ತನ್ನದಾಗಿಸಿಕೊಂಡಿತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಶೇ 12ರಷ್ಟು ಮತಗಳನ್ನು ಪಡೆದಿತ್ತು. ಆರಂಭದಲ್ಲಿ ರಾಜ್ಯದ ಚಿತ್ರಣ ಬೇರೆಯೇ ಇತ್ತು. ಕಾಂಗ್ರೆಸ್‌, ಸಿಪಿಎಂ, ಟಿಎಂಸಿ ಮತ್ತು ಬಿಜೆಪಿ ನಡುವೆ ಚತುಷ್ಕೋನ ಸ್ಪರ್ಧೆಯ ಲಕ್ಷಣಗಳು ಇದ್ದವು.

ಆದರೆ ಮಮತಾ ತಮ್ಮ ಪ್ರಚಾರದ ಆರಂಭದಿಂದಲೂ ನೇರವಾಗಿ ಮೋದಿ ಅವರನ್ನೇ ತಮ್ಮ ಗುರಿ ಮಾಡಿಕೊಂಡರು. ‘ದೀದಿ’ಅವರ ಈ ವಾಗ್ದಾಳಿಯಿಂದಾಗಿ ಚುನಾವಣೆ ‘ಮಮತಾ– ಮೋದಿ’ ಅವರ ದ್ವಿಪಕ್ಷೀಯ ಮುಖಾಮುಖಿಯಾಗಿ ಬದಲಾಗಿ ಹೋಯಿತು.

ಅಂತಿಮವಾಗಿ ಇದು ಯಾವ ಮಟ್ಟ ಮುಟ್ಟಿತೆಂದರೆ ‘ಮೋದಿ ಬೇಕು, ಮೋದಿ ಬೇಡ’ ಇವೆರೆಡರಲ್ಲಿ ಒಂದೇ ಆಯ್ಕೆಯಾಗಬೇಕು ಎನ್ನುವಂತಾಯಿತು. ಈ ಸನ್ನಿವೇಶವು ಮುಸ್ಲಿಂ ಮತಗಳು ವಿವಿಧ ಪಕ್ಷಗಳಿಗೆ ಹಂಚಿ ಹೋಗುವುದನ್ನು ತಡೆದು, ಟಿಎಂಸಿ ಪರ ಧ್ರುವೀಕರಣವಾಗುವುದಕ್ಕೆ ನೆರವಾಯಿತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.