ADVERTISEMENT

‘ನಮ್ಮ ವ್ಯವಹಾರದಲ್ಲಿ ಮೂಗು ತೂರಿಸಬೇಡಿ’

ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 13:10 IST
Last Updated 27 ಮೇ 2015, 13:10 IST
ಜನ ಕಲ್ಯಾಣ ಪರ್ವ ಸಮಾವೇಶದಲ್ಲಿ ರಾಜನಾಥ್ ಸಿಂಗ್  - ಪಿಟಿಐ ಚಿತ್ರ
ಜನ ಕಲ್ಯಾಣ ಪರ್ವ ಸಮಾವೇಶದಲ್ಲಿ ರಾಜನಾಥ್ ಸಿಂಗ್ - ಪಿಟಿಐ ಚಿತ್ರ   

ಜಮ್ಮು (ಪಿಟಿಐ): ಪಾಕಿಸ್ತಾನವು ‘ತಮ್ಮ ರಾಷ್ಟ್ರದ ಕಲ್ಯಾಣ’ ಬಯಸುವುದಾದರೆ ‌ಅದು ಕಾನೂನು ಬಾಹೀರ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಎಚ್ಚರಿಸಿದ್ದಾರೆ. ಈ ಮೂಲಕ ಭಾರತದ ವ್ಯವಹಾರದಲ್ಲಿ ಮೂಗುತೂರಿಸುವುದನ್ನು ನಿಲ್ಲಿಸುವಂತೆ ಪಾಕ್‌ಗೆ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ವರ್ಷಾಚರಣೆಯ ಸಂಭ್ರಮದ‌ ಅಂಗವಾಗಿ ಜಮ್ಮುವಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ ಕಲ್ಯಾಣ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನವು ತಮ್ಮ ರಾಷ್ಟ್ರದ ಕಲ್ಯಾಣ ಬಯಸುವುದಾದರೆ ಅದು ಇತರ ರಾಷ್ಟ್ರಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ಭಾರತ ಗುರಿಯಾಗಿಸಿ ನಡೆಸುವ ಎಲ್ಲಾ ಕಾನೂನು ಬಾಹೀರ ಚುಟುವಟಿಕೆಗಳನ್ನು ನಿಲ್ಲಿಸಬೇಕು’ ಎಂದು ಎಚ್ಚರಿಸಿದರು.

ADVERTISEMENT

ಅಲ್ಲದೇ, ‘ಯಾರು ದೇಶದ ಗೌರವ, ಏಕತೆ ಹಾಗೂ ಸಾರ್ವಭೌಮತ್ವಕ್ಕೆ ಹಾನಿ ಮಾಡುವರೋ ಅವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ನಮಗೆ ನಮ್ಮ ಸೇನೆ, ಅರೆಸೇನಾ ಪಡೆಗಳು ಹಾಗೂ ಸಶಸ್ತ್ರ ಬಲಗಳ ಮೇಲೆ ನಂಬಿಕೆಯಿದೆ. ಅವರ ಸಮಗ್ರತೆ ಹಾಗೂ ದೇಶದ ಬಗೆಗಿನ ಪ್ರೀತಿಯ ಬಗ್ಗೆ ಸಂದೇಹ ಸಲ್ಲದು’ ಎಂದು ಅವರು ನುಡಿದಿದ್ದಾರೆ.

ಇದೇ ವೇಳೆ, ಭಾರತ ನಿರಂತರವಾಗಿ ನೆರೆಯ ರಾಷ್ಟ್ರಗಳೊಂದಿಗೆ ಸ್ನೇಹ ಬಯಸುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಮಾತ್ರ ಯಾವಾಗಲೂ ಮೋಸ ಮಾಡುತ್ತಿದೆ ಎಂದು ಜರಿದರು.

‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದೆಡೆಗೆ ಸ್ನೇಹದ ಹಸ್ತ ಚಾಚಿದ್ದರು. ಆದರೆ ಅದು ಬೆನ್ನಿಗೆ ಚೂರಿ ಇರಿಯಿತು. ಮೋದಿ ಅವರು ಕಳೆದೊಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದಾಗ ನೆರೆಯ ಎಲ್ಲಾ ರಾಷ್ಟ್ರ ಮುಖ್ಯಸ್ಥರನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ್ದರು’ ಎಂದು ನೆನಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.