ADVERTISEMENT

‘ಪಾಕಿಸ್ತಾನದಲ್ಲಿ ದಾವೂದ್‌ ಇಬ್ರಾಹಿಂ’

​ಪ್ರಜಾವಾಣಿ ವಾರ್ತೆ
Published 11 ಮೇ 2015, 8:35 IST
Last Updated 11 ಮೇ 2015, 8:35 IST

ನವದೆಹಲಿ (ಪಿಟಿಐ): ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲಿರುವುದು ಖಚಿತವಾಗಿದ್ದು, ಆತನನ್ನು ದೇಶಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ದಾವೂದ್‌ ಇಬ್ರಾಹಿಂ ಬಗ್ಗೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರು ನೀಡಿದ್ದ ಗೊಂದಲಕಾರಿ ಹೇಳಿಕೆಗೆ ಸೋಮವಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌, ‘ದಾವೂದ್‌ ಇಬ್ರಾಹಿಂನನ್ನು ಭಾರತದ ವಶಕ್ಕೊಪ್ಪಿಸುವವರೆಗೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲಾಗುವುದು’ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ದಾವೂದ್‌ ಇರುವ ಬಗ್ಗೆ ‘ಖಚಿತ ಮಾಹಿತಿ’ ನೀಡಿದ್ದರೂ ಆತನನ್ನು ಪತ್ತೆ ಹಚ್ಚಲು ಪಾಕಿಸ್ತಾನ ಸೋತಿದೆ ಎಂದು ರಾಜನಾಥ್‌ ಆರೋಪಿಸಿದರು.

ADVERTISEMENT

ದಾವೂದ್ ಭಾರತಕ್ಕೆ ಬೇಕಿರುವ ಅತಿ ಪ್ರಮುಖ ಉಗ್ರನಾಗಿದ್ದು, ಆತನನ್ನು ವಶಕ್ಕೆ ನೀಡುವಂತೆ ಭಾರತವು ಪಾಕಿಸ್ತಾನಕ್ಕೆ ಪದೇಪದೇ ಕೋರುತ್ತಿದೆ ಎಂದು 2014ರ ಡಿಸೆಂಬರ್ 27 ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಲಖನೌದಲ್ಲಿ ನುಡಿದಿದ್ದರು.

ಆದರೆ, ‘ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ. ಅವನು ಸಿಕ್ಕೊಡನೆ ಆತನ ಹಸ್ತಾಂತರದ ಪ್ರಕ್ರಿಯೆಗೆ ಚಾಲನೆ ನೀಡಿಲಾಗುವುದು’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಎಚ್.ಪಿ.ಚೌಧರಿ ಅವರು ಕಳೆದ ವಾರದ (ಮೇ 5) ಲೋಕಸಭೆಯಲ್ಲಿ ತಿಳಿಸಿದ್ದರು.

ಚೌಧರಿ ಅವರು ಹೇಳಿಕೆ ನೀಡಿದ ನಂತರದ ಕೆಲವು ಗಂಟೆಗಳಲ್ಲಿಯೇ ಗೃಹಖಾತೆಯ ಮತ್ತೊಬ್ಬ ರಾಜ್ಯ ಸಚಿವ ಕಿರಣ್‌ ರಿಜಿಜು ಅವರು ‘ದಾವೂದ್ ಪಾಕಿಸ್ತಾನದಲ್ಲಿದ್ದಾನೆ’ ಎಂದು ಸಂಸತ್ತಿನ ಹೊರಗಡೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.