ADVERTISEMENT

‘ಬಿಬಿಸಿ ವಿರುದ್ಧ ಕಾನೂನು ಹೋರಾಟ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 9:22 IST
Last Updated 5 ಮಾರ್ಚ್ 2015, 9:22 IST

ಬಲಿಯಾ, ಉತ್ತರ ಪ್ರದೇಶ (ಪಿಟಿಐ): ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿಯ ಹೆಸರು ಬಹಿರಂಗ ಪಡಿಸಿದ ಬಿಬಿಸಿ ವಾಹಿನಿಯ ಕ್ರಮವನ್ನು ಉಗ್ರವಾಗಿ ಖಂಡಿಸಿರುವ ಸಂತ್ರಸ್ತೆಯ ಕುಟುಂಬ ಸದಸ್ಯರು ವಾಹಿನಿಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

‘ಮಗಳ ಭಾವಚಿತ್ರ ಹಾಗೂ ಹೆಸರು ಬಹಿರಂಗಪಡಿಸದಂತೆ ಮೊದಲೇ ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ, ಅವರು ಮಾತು ಮುರಿದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.

‘ಬಿಬಿಸಿ ಭಾರತ ಸರ್ಕಾರಕ್ಕೆ ಒಂದು ಸವಾಲೆಸೆದಿದೆ. ಸರ್ಕಾರ ಆದಷ್ಟು ಬೇಗ ಇದಕ್ಕೆ ತಕ್ಕ ಉತ್ತರ ನೀಡುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ವಿವಾದಿತ ಸಾಕ್ಷ್ಯಚಿತ್ರದ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಅವರ ನಿಲುವು ಸರಿಯಾದುದು ಎಂದು ಹೇಳಿರುವ ಅವರು ಸರ್ಕಾರ ಈ ವಿಷಯವನ್ನು ಸುಪ್ರೀಂಕೋರ್ಟ್‌ಗೆ ತಂದು ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಸಾಕ್ಷ್ಯಚಿತ್ರ ಪ್ರಸಾರಕ್ಕೆ ತಡೆ ವಿಧಿಸಿದರೂ ಬಿಬಿಸಿ ಕಳೆದ ರಾತ್ರಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.