ADVERTISEMENT

‘ಭಾರತವೂ ಕದನ ವಿರಾಮ ಉಲ್ಲಂಘಿಸಬೇಕು’

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಮುಂಬೈ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಗಡಿ ಉದ್ದಕ್ಕೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತವೂ ಸಹ ಕದನ ವಿರಾಮ ಉಲ್ಲಂಘಿಸಬೇಕು ಎಂದು ಶಿವ ಸೇನಾ ಬುಧವಾರ ಹೇಳಿದೆ.

‘2013ರಲ್ಲಿ ಪಾಕ್‌ 347 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. 2014ರಲ್ಲಿ ಈ ಸಂಖ್ಯೆ 562ಕ್ಕೆ ಏರಿಕೆಯಾಗಿದೆ. ಗಡಿಯಲ್ಲಿರುವ ಸುಮಾರು 32 ಸಾವಿರ ಮಂದಿ ಈಗಾಗಲೇ ಗಡಿ ಪ್ರದೇಶವನ್ನು ತೊರೆದು ಬೇರೆಡೆ ವಾಸ್ತವ್ಯ ಹೂಡಿದ್ದಾರೆ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ತನ್ನ ಸಂಪಾದಕೀಯದಲ್ಲಿ ಪ್ರಕಟಿಸಿದೆ.

‘ಭಾರತದ ಸೈನಿಕರು ಪಾಕಿಸ್ತಾನಿ ಸೈನಿಕರನ್ನು ಕೊಲ್ಲುವ ಮೂಲಕ ಪ್ರತೀಕಾರ ತೀರಿಸಿಕೊಂಡಾಗ ಮಾತ್ರ ಪಾಕ್‌ ದಾಳಿ ನಿಲ್ಲಿಸುತ್ತದೆ. ಸಣ್ಣ ದೇಶವಾದ ಪಾಕಿಸ್ತಾನವೇ ಇಷ್ಟೊಂದು ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ  ನಡೆಸಿದಾಗ ಭಾರತ ಉಲ್ಲಂಘಿಸುವುದರಲ್ಲಿ ತಪ್ಪಿಲ್ಲ’ ಎಂದು ಸೇನಾ ಹೇಳಿದೆ.

‘ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅತ್ಯಂತ ಕಠೋರವಾಗಿದೆ. ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿ ಪಾಕ್‌ ಭಯೋತ್ಪಾದನೆಗೆ ಸಹಕಾರ ನೀಡುತ್ತಿತ್ತು. ಆದರೆ ಈಗ ಅದೇ ಪಾಕಿಸ್ತಾನವನ್ನು ನಾಶ ಮಾಡುತ್ತಿದೆ. ಭಾರತದಲ್ಲಿ ಭಯೋತ್ಪಾದನಾ  ಚಟುವಟಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಆದರೆ ಪಾಕ್‌ನಲ್ಲಿ ಅದು ನಿತ್ಯ ಚಟುವಟಿಕೆಯಂತಾಗಿದೆ’ ಎಂದಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಗಡಿ ನಿಯಂತ್ರಣ ರೇಖೆ ಬಳಿ ಸೋಮವಾರ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.