ADVERTISEMENT

‘ಮಾನನಷ್ಟ ಸುತ್ತೋಲೆ’ಗೆ ಸುಪ್ರೀಂ ತಡೆ

​ಪ್ರಜಾವಾಣಿ ವಾರ್ತೆ
Published 14 ಮೇ 2015, 9:25 IST
Last Updated 14 ಮೇ 2015, 9:25 IST

ನವದೆಹಲಿ (ಐಎಎನ್‌ಎಸ್‌): ಸರ್ಕಾರದ ಘನತೆಗೆ ಚ್ಯುತಿ ತರುವಂಥ ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ದೆಹಲಿ ಸರ್ಕಾರ ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂಕೋರ್ಟ್‌ ಗುರುವಾರ ತಡೆಯಾಜ್ಞೆ ವಿಧಿಸಿದೆ.

ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾಧ್ಯಮ ಸಂಸ್ಥೆಗಳ ಬಗ್ಗೆ ಹೊರಡಿಸಿರುವ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಕೇಜ್ರಿವಾಲ್‌ ಅವರ ಇಬ್ಬಂದಿತನವನ್ನು ಪ್ರಶ್ನಿಸಿದೆ.

‘ನಿಮ್ಮ ವಿರುದ್ಧ ಮಾನಹಾನಿಯಾಗದಂತೆ ಸುತ್ತೋಲೆ ಹೊರಡಿಸುತ್ತೀರಿ. ನೀವು ಮಾನಹಾನಿ ಆರೋಪಕ್ಕೆ ಗುರಿಯಾಗಿರುವಾಗ ಕಾನೂನು ಪ್ರಕ್ರಿಯೆಗೆ ತಡೆಯಾಜ್ಞೆ ಕೋರುತ್ತೀರಿ. ಮಾನನಷ್ಟ ಮೊಕದ್ದಮೆಯ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳ ಬಗ್ಗೆ ಏನೆಂದುಕೊಂಡಿದ್ದೀರಿ?’ ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಪ್ರಫುಲ್ಲಾ ಸಿ. ಪಂತ್‌ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ.

ADVERTISEMENT

ಕೇಜ್ರಿವಾಲ್‌ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆಯ ಕಾನೂನು ಪ್ರಕ್ರಿಯೆಗೆ ವಿಧಿಸಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಅಮಿತ್‌ ಸಿಬಲ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಮಿತ್‌ ಸಿಬಲ್‌ ಅವರ ಮನವಿಯನ್ನು ತಳ್ಳಿಹಾಕಿರುವ ನ್ಯಾಯಪೀಠ, ‘ಕೇಜ್ರಿವಾಲ್‌ ಅವರ ಪ್ರಕರಣದ ತಡೆಯಾಜ್ಞೆ ತೆರವುಗೊಳಿಸುವುದಿಲ್ಲ. ಆದರೆ, ಮಾನನಷ್ಟ ಮೊಕದ್ದಮೆ ಬಗ್ಗೆ ದೆಹಲಿ ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ತಡೆ ವಿಧಿಸಲಾಗುವುದು’ ಎಂದು ಹೇಳಿದೆ.

ಸರ್ಕಾರ ಅಥವಾ ಮುಖ್ಯಮಂತ್ರಿಯವರ ಘನತೆಗೆ ಕುಂದುಂಟುಮಾಡುವಂಥ ಸುದ್ದಿ ಪ್ರಕಟ ಅಥವಾ ಪ್ರಸಾರವಾಗಿದ್ದು ಸರ್ಕಾರಿ ಅಧಿಕಾರಿಗಳ ಗಮನಕ್ಕೆ ಬಂದರೆ ಅವರು ಆ ಸುದ್ದಿಯ ಮಾಹಿತಿಯ ಜತೆಗೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಬೇಕೆಂದು ದೆಹಲಿಯ ವಾರ್ತಾ ಮತ್ತು ಪ್ರಚಾರ ಇಲಾಖೆಯು ಮೇ 6ರಂದು ಸುತ್ತೋಲೆ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.