ADVERTISEMENT

‘ಮೋದಿ ಸರ್ಕಾರ ರೈತ ವಿರೋಧಿ’

ಕೃಷಿ ಬೆಳವಣಿಗೆ ಶೇ 4.7ರಿಂದ ಶೇ 1.1ಕ್ಕೆ ಕುಸಿತ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 22 ಮೇ 2015, 20:23 IST
Last Updated 22 ಮೇ 2015, 20:23 IST

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಹಾಗೂ ರೈತರ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ.  ಯುಪಿಎ ಆಡಳಿತದಲ್ಲಿ ಶೇ 4.7ರಷ್ಟಿದ್ದ ಕೃಷಿ ಕ್ಷೇತ್ರದ ಬೆಳವಣಿಗೆ ದರ ಎನ್‌ಡಿಎ ಆಡಳಿತಾವಧಿಯಲ್ಲಿ ಶೇ 1.1ಕ್ಕೆ ಕುಸಿದಿದೆ’ ಎಂದು ಎಐಸಿಸಿ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಯುಪಿಎ ಸರ್ಕಾರ 2003ರಿಂದ 2014ರವರೆಗೆ ಪ್ರತಿ ಕ್ವಿಂಟಲ್‌ ಗೋಧಿಗೆ ನೀಡುತ್ತಿದ್ದ ಕನಿಷ್ಠ ಬೆಂಬಲ ಬೆಲೆಯಲ್ಲಿ ₹ 760, ಭತ್ತದ ಬೆಂಬಲ ಬೆಲೆಯಲ್ಲಿ ₹ 750, ಹತ್ತಿಯ ಬೆಂಬಲ ಬೆಲೆಯಲ್ಲಿ ₹ 2ಸಾವಿರ, ಹೆಸರುಕಾಳಿನ ಬೆಂಬಲ ಬೆಲೆಯಲ್ಲಿ ₹ 3090ಕ್ಕೆ ಹೆಚ್ಚಳ ಮಾಡಿತ್ತು.  ಈಗಿನ ಸರ್ಕಾರ ಹೆಸರುಕಾಳಿನ ಬೆಂಬಲ ಬೆಲೆಯನ್ನು ₹ 100 ಹೆಚ್ಚಿಸಿದ್ದು ಹೊರತುಪಡಿಸಿ ಬೇರೆ ಯಾವುದೇ ಬೆಳೆಯ ಬೆಂಬಲ ಬೆಲೆಯನ್ನು ₹ 50ಕ್ಕಿಂತ ಹೆಚ್ಚು ಏರಿಸಿಲ್ಲ. ಸರ್ಕಾರದ ರೈತರ ವಿರೋಧಿ ಧೋರಣೆಗೆ ಇದು ಉದಾಹರಣೆ’ ಎಂದರು.

‘ಪ್ರತಿ ಕೆ.ಜಿ.ಗೆ ₹ 200 ಇದ್ದ ರಬ್ಬರ್‌ ಬೆಲೆ  ₹ 120 ಕ್ಕೆ ಕುಸಿದಿದೆ.  ಬಾಸ್ಮತಿ ಅಕ್ಕಿ ಬೆಲೆಯೂ ಅರ್ಧದಷ್ಟು  ಇಳಿದಿದೆ. 2003ರಿಂದ 2014ರವರೆಗೆ ಕೃಷಿ ರಫ್ತು 7 ಪಟ್ಟು ಹೆಚ್ಚಿತ್ತು. ಕಳೆದ ವರ್ಷ  ಶೇ 29 ಕುಸಿತ ಕಂಡಿದೆ’ ಎಂದರು. 

‘ಯೂರಿಯಾ ಕೊರತೆ ನೀಗಿಸುವುದಕ್ಕೂ ಕೇಂದ್ರ ಕ್ರಮ ಕೈಗೊಂಡಿಲ್ಲ.   ಅಕಾಲಿಕ ಮಳೆಯಿಂದ   ದೇಶದಲ್ಲಿ 200 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಇನ್ನೂ  ಕೇಂದ್ರ ಸರ್ಕಾರ ಬೆಲೆ ಪರಿಹಾರವನ್ನು ಸಂತ್ರಸ್ತರಿಗೆ ತಲುಪಿಸಿಲ್ಲ’  ಎಂದರು.

‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ  ಕೃಷಿಕರಿಗೆ ಅನುಕೂಲ ಆಗಿತ್ತು. ಪೂರ್ಣಗೊಂಡ ಕೆಲಸಗಳಿಗೆ ಪಾವತಿಸಬೇಕಾದ ₹ 6ಸಾವಿರ ಕೋಟಿಯನ್ನೂ ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ’ ಎಂದು ಆರೋಪಿಸಿದರು. 

‘ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಭೂಸ್ವಾಧೀನ ಮಸೂದೆಯನ್ನಲ್ಲ; ರೈತರ ಜೀವ ಹಿಂಡುವ ಮಸೂದೆಯನ್ನು’ ಎಂದು ಅವರು ಟೀಕಿಸಿದರು.
*
ಮೋದಿ ಸರ್ಕಾರ ಕೃಷಿ ಸಂಸ್ಕೃತಿಯನ್ನು ಮರೆತಿದೆ. ಅವರಿಗೇನಿದ್ದರೂ  ಕಾಂಗ್ರೆಸ್ ಟೀಕಿಸುವ ಸಂಸ್ಕೃತಿ ಮಾತ್ರ ಗೊತ್ತು.
- ಅಭಿಷೇಕ್‌ ಮನು ಸಿಂಘ್ವಿ,
ಎಐಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.