ADVERTISEMENT

‘ವ್ಯಾಪಂ’ನಿಂದ ಆಯ್ಕೆಯಾಗಿದ್ದ ಮಹಿಳಾ ಎಸ್‌ಐ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 7:20 IST
Last Updated 6 ಜುಲೈ 2015, 7:20 IST

ಸಾಗರ್‌, ಮಧ್ಯಪ್ರದೇಶ (ಪಿಟಿಐ): ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಂ)ಯಿಂದ ನಡೆದಿದ್ದ ನೇಮಕಾತಿಯಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದ ತರಬೇತಿನಿರತ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಶವ ಇಲ್ಲಿನ ಕೇಂದ್ರ ಪೊಲೀಸ್ ಅಕಾಡೆಮಿ ಪಕ್ಕದ ಕೆರೆಯ ಬಳಿ ಸೋಮವಾರ ಪತ್ತೆಯಾಗಿದೆ.

ಅನಾಮಿಕಾ ಶಿಖರವಾ (25) ಮೃತಪಟ್ಟಿರುವ ತರಬೇತಿ ನಿರತ ಸಬ್‌ಇನ್‌ಸ್ಪೆಕ್ಟರ್. ಅವರ ಶವ ಇಲ್ಲಿನ ಕೆರೆ ಬಳಿ ಲಭ್ಯವಾಗಿದ್ದು, ಈ ಸಾವು ಆತ್ಮಹತ್ಯೆ ಎಂದು ಸಾಗರ್ ನಗರ ಪೊಲೀಸ್ ವರಿಷ್ಠಾಧಿಕಾರಿ ಗೌತಮ್ ಸೋಲಂಕಿ ಹೇಳಿದ್ದಾರೆ.

ಅನಾಮಿಕಾ ಶಿಖರವಾ ಅವರು ವಿವಾಹಿತೆಯಾಗಿದ್ದು, ಮೊರಿನಾ ಜಿಲ್ಲೆಯ ನಿವಾಸಿಯಾಗಿದ್ದರು. ‘ವ್ಯಾಪಂ’ನ ನೇಮಕಾತಿ ಪ್ರಕ್ರಿಯೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾಗಿದ್ದರು.

ಆದರೆ, ‘ವ್ಯಾಪಂ’ ಹಗರಣ ಹಾಗೂ ಇವರ ಸಾವಿಗೆ ಯಾವುದೇ ಸಂಬಂಧ ಇರುವ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಅನಾಮಿಕಾ ಶಿಖರವಾ ಅವರು ತಮ್ಮ ಕೋಣೆಯಿಂದ ಕಾಣೆಯಾಗಿದ್ದರು. ಕೆರೆಯ ಬಳಿ ಅವರ ಶವ ಪತ್ತೆಯಾಗಿದೆ. ಹೀಗಾಗಿ, ಇದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.