ADVERTISEMENT

‘ಸರ್ಕಾರ ಉರುಳಿಸುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:42 IST
Last Updated 19 ನವೆಂಬರ್ 2014, 19:42 IST

ಅಲಿಭಾಗ್ (ಮಹಾರಾಷ್ಟ್ರ) (ಪಿಟಿಐ): ಸರ್ಕಾರವನ್ನು ಸ್ಥಿರವಾಗಿರಿಸುವುದು ನಮ್ಮ ಹೊಣೆಯಲ್ಲ ಎಂದು ಮಂಗಳ­ವಾರ ಹೇಳಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ, ‘ನಾವು ಸರ್ಕಾರ ಉರುಳಿಸುವುದಿಲ್ಲ’ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿ ನಡೆದ ಎನ್‌ಸಿಪಿ ನಾಯಕರ ಎರಡು ದಿನಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ನಮಗೆ ಆಸಕ್ತಿ­ಯಿಲ್ಲ. ನನ್ನ ಮಾತಿಗೆ ಬಣ್ಣ ಹಚ್ಚಿ, ಉತ್ಪ್ರೇಕ್ಷೆ ಮಾಡಲಾಗಿದೆ ಅಷ್ಟೆ. ಆದರೆ ರಾಜ್ಯದ ಹಿತಕ್ಕೆ ಧಕ್ಕೆಯಾದರೆ, ಯಾವುದೇ ಪಕ್ಷ ಅಂತಹ ನಿಲುವು ತೆಗೆದುಕೊಳ್ಳುತ್ತದೆ’ ಎಂದರು.

‘ಹಾಗೆಂದು ನಾವು ಸರ್ಕಾರವನ್ನು ಅಸ್ಥಿರಗೊಳಿಸುತ್ತೇವೆ ಎಂದು ಭಾವಿಸ­ಬೇಕಿಲ್ಲ. ಆದರೆ ಸರ್ಕಾರ ಸರಿಯಾದ ನಿಲುವು ಅಥವಾ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ನಿಲುವನ್ನು ವ್ಯಕ್ತಪಡಿಸುತ್ತೇವೆ. ನಮಗೆ ವಿರೋಧ ಪಕ್ಷದ ಸ್ಥಾನ ತೋರಿಸಲಾಗಿದೆ. ಜನರ ಹಿತಕ್ಕಾಗಿ ನಾವು ಬೀದಿಗಳಿಯಲು ಸಿದ್ಧರಿದ್ದೇವೆ’ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಪ್ರತಿಕ್ರಿಯಿಸಿರುವ ಪವಾರ್, ‘ಉತ್ಪನ್ನದ ಗುಣಮಟ್ಟ ಹೇಗಿದೆಯೋ ತಿಳಿದಿಲ್ಲ. ಆದರೆ ಮಾರು­ಕಟ್ಟೆ ತಂತ್ರ ಮಾತ್ರ ಉತ್ತಮವಾಗಿದೆ. ಮೋದಿ ಮಾಧ್ಯಮವನ್ನು, ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು  ಪರಿಣಾಮ­­ಕಾರಿಯಾಗಿ ಬಳಸಿಕೊಳ್ಳುತ್ತಿ­ದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.