ADVERTISEMENT

‘ಸುನಂದಾ ಸಾವು ಆತ್ಮಹತ್ಯೆಯಲ್ಲ ಕೊಲೆ’

ವಿಷಪ್ರಾಷನದಿಂದ ಸಾವು: ಏಮ್ಸ್ ವರದಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2015, 10:09 IST
Last Updated 6 ಜನವರಿ 2015, 10:09 IST

ನವದೆಹಲಿ(ಪಿಟಿಐ/ಐಎಎನ್ ಎಸ್): ‘ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವು ಆತ್ಮಹತ್ಯೆಯಲ್ಲ; ಅದು ಕೊಲೆ’ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಮಂಗಳವಾರ ತಿಳಿಸಿದರು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಸುನಂದಾ ಪುಷ್ಕರ್ ಅವರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ಡಿ. 29ರಂದು ನೀಡಿದೆ. ಇದರಲ್ಲಿ ಪುಷ್ಕರ್ ಸಾವು ಸಂಭವಿಸಿರುವುದು ವಿಷಪ್ರಾಷನದಿಂದ; ಇದೊಂದು ‘ಅಸಹಜ ಸಾವು’ ಎಂದು ವಿವರಿಸಿರುವುದಾಗಿ ತಿಳಿಸಿದ್ದಾರೆ.

ವಿಷವನ್ನು ಸೂಜಿ ಮೂಲಕ ದೇಹಕ್ಕೆ ಚುಚ್ಚಲಾಗಿದೆಯೋ ಅಥವಾ ನೇರವಾಗಿ ಅವರಿಗೆ ನೀಡಲಾಗಿದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಏಮ್ಸ್ ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆ ವಿವರ: ಸುನಂದಾ ಪುಷ್ಕರ್ ಅವರ ಮೃತ ದೇಹ ದೆಹಲಿಯ ಪಂಚತಾರಾ ಹೋಟೆಲ್ ಲೀಲಾ ಪ್ಯಾಲೆಸ್‌ನಲ್ಲಿ 2014ರ ಜನವರಿ 17ರಂದು ರಾತ್ರಿ ಪತ್ತೆಯಾಗಿತ್ತು. ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಹಾಗೂ ಶಶಿ ತರೂರ್ ನಡುವಣ ಪ್ರಣಯ ಪ್ರಸಂಗದ ಬಗ್ಗೆ ಟ್ವಿಟ್ಟರ್‌ನಲ್ಲಿ ದೊಡ್ಡ ವಿವಾದ ಎದ್ದ ಬೆನ್ನಲ್ಲೇ ಈ ಘಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT