ADVERTISEMENT

‘ಸುಪ್ರೀಂ’ನಿಂದ ಅರ್ಜಿ ವಜಾ

ಕ್ಯಾಂಪಾ ಕೋಲಾ ಅಕ್ರಮ ವಸತಿ ಸಂಕೀರ್ಣ ನೆಲಸಮ

​ಪ್ರಜಾವಾಣಿ ವಾರ್ತೆ
Published 3 ಜೂನ್ 2014, 19:30 IST
Last Updated 3 ಜೂನ್ 2014, 19:30 IST

ನವದೆಹಲಿ (ಪಿಟಿಐ): ಮುಂಬೈನ ಕ್ಯಾಂಪಾ ಕೋಲಾ ಹೌಸಿಂಗ್‌ ಸೊಸೈಟಿ  ಕಾನೂನು ಬಾಹಿರವಾಗಿ ನಿರ್ಮಿಸಿದ ವಸತಿ ಸಂಕೀರ್ಣದ ಮನೆಗಳನ್ನು  ನೆಲಸಮಗೊಳಿಸದಂತೆ ಅಲ್ಲಿಯ ನಿವಾಸಿಗಳು ಮಾಡಿಕೊಂಡ ಮನವಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಮೇ 31ರೊಳಗಾಗಿ ಮನೆಗಳನ್ನು ಖಾಲಿ ಮಾಡುವಂತೆ ಈ ಹಿಂದೆ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಿವಾಸಿಗಳು ಮೇಲ್ಮನವಿ ಸಲ್ಲಿಸಿದ್ದರು. ‘ವಸತಿ ಸಂಕೀರ್ಣದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಗಳನ್ನು ನೆಲಸಮಗೊಳಿಸಿದರೆ 140ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗುತ್ತವೆ.  ಈ ಪ್ರಕರಣವನ್ನು ಕೇವಲ ಕಾನೂನು ದೃಷ್ಟಿಯಿಂದ ಪರಿಶೀಲಿಸದೆ ಮಾನ­ವೀಯ ದೃಷ್ಟಿಯಿಂದ ಪರಿಗಣಿಸಬೇಕು’ ಎಂದು ಕೋರಿ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. 

‘ಪ್ರತಿ ಪ್ರಕರಣದ ಹಿಂದೆಯೂ ಒಂದಲ್ಲ ಒಂದು ಮಾನವೀಯ ಕಾರಣ ಇದ್ದೇ ಇರುತ್ತದೆ. ಮಾನವೀಯ ದೃಷ್ಟಿಯಿಂದ ಇತ್ಯರ್ಥಗೊಳಿಸಿದರೆ ನ್ಯಾಯಾಲಯಗಳ ಅಗತ್ಯವೇ ಇರುವುದಿಲ್ಲ’ ಎಂದು ನ್ಯಾಯಮೂರ್ತಿ ಗಳಾದ ಜೆ.ಎಸ್‌. ಖೇಹರ್‌ ಮತ್ತು ಸಿ. ನಾಗಪ್ಪನ್‌  ಅವರ ಪೀಠ ಅಭಿಪ್ರಾಯಪಟ್ಟಿತು.

ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ಇತ್ಯರ್ಥಗೊಳ್ಳುವ ತನಕವಾದರೂ ಕಟ್ಟಡವನ್ನು ನೆಲಸಮಗೊಳಿಸದಂತೆ ತಡೆ ಹಿಡಿಯಬೇಕು ಎಂದು ನಿವಾಸಿಗಳ ಪರ ವಕೀಲರು ಕೋರಿದರು. ಆದರೆ, ಪೀಠ ಅವರ ಈ ಮನವಿಯನ್ನು  ಪುರಸ್ಕರಿಸಲಿಲ್ಲ. ಕ್ಯಾಂಪಾ ಕೋಲಾ ಹೌಸಿಂಗ್‌ ಸೊಸೈಟಿ 1981ರಿಂದ 89ರ ಅವಧಿಯಲ್ಲಿ ಮುಂಬೈನಲ್ಲಿ  ಏಳು ವಸತಿ ಸಂಕೀರ್ಣ ನಿರ್ಮಿಸಿತ್ತು.  ಆರು ಅಂತಸ್ತಿನ ಕಟ್ಟಡಗಳಿಗೆ ಮಾತ್ರ ಅನುಮತಿ ಪಡೆದಿದ್ದ ಸೊಸೈಟಿ 20 ಮತ್ತು 17 ಅಂತಸ್ತಿನ ವಸತಿ ಸಂಕೀರ್ಣ ನಿರ್ಮಿಸಿದ್ದು ಸಮಸ್ಯೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.