ADVERTISEMENT

₹25 ಸಾವಿರ ಕೋಟಿ ನಷ್ಟ: ಅಸೋಚಾಂ

ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರ: ಕಲ್ಲಿದ್ದಲು ಉತ್ಪಾದನೆಗೆ ಹೊಡೆತ, ಪ.ಬಂಗಾಳದಲ್ಲಿ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:45 IST
Last Updated 2 ಸೆಪ್ಟೆಂಬರ್ 2015, 19:45 IST

ನವದೆಹಲಿ (ಪಿಟಿಐ): ರಸ್ತೆ ಸುರಕ್ಷತಾ ಮಸೂದೆ ವಿರೋಧಿಸಿ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರದಿಂದ ಅಂದಾಜು ₹ ₹25 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜು ಮಾಡಿದೆ.

ಕೈಗಾರಿಕೆ, ಬ್ಯಾಂಕ್‌, ರಫ್ತು ವಹಿವಾಟು ಸೇರಿದಂತೆ ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ. ಬಂದ್‌ನಿಂದ ಆಗುವ ಪರೋಕ್ಷ  ನಷ್ಟವನ್ನೂ ಲೆಕ್ಕ ಹಾಕಿದರೆ ನಷ್ಟ ದ ಮೊತ್ತ₹ 25 ಸಾವಿರ ಕೋಟಿಯನ್ನು ದಾಟಬಹುದು ಎಂದು ‘ಅಸೋಚಾಂ’ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ರಾವತ್‌ ಹೇಳಿದ್ದಾರೆ.

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಲ್ಲಿದ್ದಲು ಉತ್ಪಾದನೆಗೆ ಹೊಡೆತ ಬಿದ್ದಿದೆ. ಸಾಕಷ್ಟು ಕಲ್ಲಿದ್ದಲು ದಾಸ್ತಾನು ಇರುವುದರಿಂದ ಇದರಿಂದ  ವಿದ್ಯುತ್‌ ಉತ್ಪಾದನೆಗೆ ತೊಂದರೆಯಾಗುವುದಿಲ್ಲ ಎಂದು ವಿದ್ಯುತ್‌ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.

ಮುಷ್ಕರದಿಂದಾಗಿ ಕಬ್ಬಿಣದ ಅದಿರು ಉತ್ಪಾದನೆಗೂ ತೊಂದರೆಯಾಗಿದೆ. ಬ್ಯಾಂಕಿಂಗ್‌ ಸೇವೆ ಹಾಗೂ ಸಾರಿಗೆ ಸೇವೆಯಲ್ಲೂ ವ್ಯತ್ಯಯವಾಗಿದೆ. ಪಶ್ಚಿಮಬಂಗಾಳದಲ್ಲಿ ಎಡಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವಣ ಘರ್ಷಣೆಯಲ್ಲಿ ಹಿಂಸಾಚಾರ ಸಂಭವಿಸಿದ್ದು, ಪೊಲೀಸರು 200 ಜನರನ್ನು ಬಂಧಿಸಿದ್ದಾರೆ.

ಪಶ್ಚಿಮಬಂಗಾಳ, ತ್ರಿಪುರಾ, ಕೇರಳ, ಕರ್ನಾಟಕ, ಪುದುಚೇರಿ ಹಾಗೂ ಒಡಿಶಾದಲ್ಲಿ ಮುಷ್ಕರದ ಪರಿಣಾಮ  ಎದ್ದುಕಾಣುವಂತಿತ್ತು. ದೆಹಲಿ, ಪಂಜಾಬ್‌, ಹರಿಯಾಣ, ತಮಿಳುನಾಡು, ಗೋವಾ, ಗುಜರಾತ್‌, ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿ ಮುಷ್ಕರ ಭಾಗಶಃ ಯಶಸ್ವಿಯಾಯಿತು. ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಶಾಲಾ ಮಕ್ಕಳು ರಸ್ತೆ ಮೇಲೆ ಕಾಯುತ್ತಿರುವ ದೃಶ್ಯ ಕಂಡುಬಂತು. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಟ್ಯಾಕ್ಸಿ, ಆಟೊ ಸೇವೆ ಇಲ್ಲದೇ ಪರದಾಡಿದರು.

*
ಕಾರ್ಮಿಕ ಸಂಘಟನೆಗಳ ಬೇಡಿಕೆ ಏನಿತ್ತು?
*ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯ ಹಾಗೂ  ರೋಗಗ್ರಸ್ತ ಘಟಕಗಳ ಮುಚ್ಚುವ ನಿರ್ಧಾರ ಕೈಬಿಡಿ. ಅದರ ಬದಲು ರೋಗಗ್ರಸ್ತ ಘಟಕಗಳಿಗೆ ಪುನಶ್ಚೇತನ ನೀಡಿ

* ಸರ್ಕಾರ ಉದ್ದೇಶಿಸಿದಂತೆ ಕಾರ್ಖಾನೆ ಸ್ಥಾಪನೆ ಕಾಯ್ದೆ, ಬೋನಸ್‌ ಕಾಯ್ದೆ ಮತ್ತು ಕೈಗಾರಿಕಾ ವ್ಯವಹಾರ ಕಾಯ್ದೆಗಳಿಗೆ ತಿದ್ದುಪಡಿ ತಂದಲ್ಲಿ ಶೇ 75ರಷ್ಟು ನೌಕರರು ಕಾರ್ಮಿಕ ಕಾಯ್ದೆ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ.

* 40 ಸಿಬ್ಬಂದಿ ಇರುವ ಸಣ್ಣ ಕಾರ್ಖಾನೆಗಳನ್ನು ಕಾರ್ಮಿಕ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ಯತ್ನಿಸುತ್ತಿದೆ. ಇದರಿಂದಾಗಿ ಬಹುತೇಕ ಕಾರ್ಮಿಕರ ಉದ್ಯೋಗ ಭದ್ರತೆ ಕಳೆದುಕೊಳ್ಳುತ್ತಾರೆ.

*ಬ್ಯಾಂಕಿಂಗ್‌, ನಿರ್ಮಾಣ, ಕಲ್ಲಿದ್ದಲು ಗಣಿ ಹಾಗೂ ತಯಾರಿಕಾ ವಲಯದ   ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಹೊಸ ಕಾರ್ಮಿಕ ಕಾಯ್ದೆಯಿಂದಾಗಿಕಾರ್ಮಿಕ ಸಂಘಟನೆಗಳ ಪ್ರಭಾವ ಕಡಿಮೆಯಾಗಲಿದೆ.

* ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ದಿನಗೂಲಿ ನೌಕರರು, ಮನೆ ಕೆಲಸದವರು ಸಹ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

*
ಮುಖ್ಯಾಂಶಗಳು
* ಸಂಘಟಿತ ವಲಯದ 15 ಕೋಟಿ ಉದ್ಯೋಗಿಗಳಿಂದ ಮುಷ್ಕರ
* ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ
* ವಿಮಾನ ಪ್ರಯಾಣಿಕರಿಗೆ ತೊಂದರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT