ADVERTISEMENT

11ಕ್ಕೂ ಹೆಚ್ಚು ಆರೋಪಿಗಳ ಸೆರೆ

ಮಣಿಪಾಲ ಸಂಸ್ಥೆಯಲ್ಲಿ ವೈದ್ಯಕೀಯ ಪ್ರಶ್ನೆಪತ್ರಿಕೆ ಸೋರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST

ಹೈದರಾಬಾದ್‌ (ಪಿಟಿಐ): ವಿಜಯ­ವಾಡ ಮೂಲದ ಡಾ. ಎನ್‌ಟಿಆರ್‌ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅವ್ಯವ­ಹಾರಗಳ ಬಗ್ಗೆ ತನಿಖೆ ನಡೆಸುತ್ತಿ­ರುವ ಆಂಧ್ರ­ಪ್ರದೇಶ ಪೊಲೀಸರು, ಮಂಗಳ­ವಾರ ಏಳು ಬ್ರೋಕರ್‌ಗಳು ಮತ್ತು ನಾಲ್ವರು ಅಭ್ಯ­ರ್ಥಿ­ಗಳು ಸೇರಿ­ದಂತೆ 11ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಖಚಿತವಾಗಿದ್ದು, ಈ ಹಿನ್ನೆಲೆ­ಯಲ್ಲಿ ಹಗ­ರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಬ್ರೋಕ­­ರ್‌ಗಳು ಮತ್ತು 11 ವಿದ್ಯಾರ್ಥಿ­ಗಳು ಸೇರಿದಂತೆ ಒಟ್ಟು 20 ಜನರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿ­ಯಾಗಿದ್ದಾರೆ.

ಮಣಿಪಾಲ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿರುವುದನ್ನು ಸಿಐಡಿ ತನಿಖೆ ಬಹಿರಂಗ ಪಡಿಸಿದೆ. ಹಗರಣದ ತನಿಖೆ ಮುಂದು­ವರಿ­ದಿದ್ದು, ಪ್ರಮುಖ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೋಕರ್‌ಗಳಾದ ಭೂಷಣ್‌ ರೆಡ್ಡಿ, ಪಾಲ್ಸನ್‌, ಕಿಷ್ಟಪ್ಪ, ಚಕ್ರವರ್ತಿ, ವಿಜಯ್‌, ಅಭಿಮನ್ಯು ಹಾಗೂ ಪ್ಯಾಟ್ರಿಕ್‌ ಮತ್ತು ಅಭ್ಯರ್ಥಿಗಳಾದ ರಾಮ­ರಾವ್‌, ಸಾಯಿ ಪ್ರಣೀತ್‌, ಕೆ. ರಮಣ ಹಾಗೂ ಪಿ. ಭರತ್‌ ಕುಮಾರ್‌ ಅವರನ್ನು ಬಂಧಿಸಿ, ಅಕ್ರಮಕ್ಕೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳ­ಲಾಗಿದೆ ಎಂದು ಅವರು ಹೇಳಿದ್ದಾರೆ.

ದಾವಣಗೆರೆಯ ಅಮೀರ್‌ ಅಹ­ಮದ್‌ ಮತ್ತು ಬ್ರೋಕರ್‌ಗಳ ಸಂಚಿ­ನಿಂದಾಗಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ  ಸಾಧ್ಯವಾಗಿದೆ. ದಾವಣಗೆರೆ­ಯವರೇ ಆದ ಪಾಲ್ಸನ್‌, ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಚು ನಡೆಸಿದ ಬ್ರೋಕರ್‌ಗಳಲ್ಲೊಬ್ಬ. ಇತರ ಬ್ರೋಕರ್‌ಗಳಾದ ಕಿಷ್ಟಪ್ಪ ಮತ್ತು ಚಕ್ರವರ್ತಿ ಅವರ ಮೂಲಕ ಕ್ರಮವಾಗಿ 7, 15 ಹಾಗೂ 26ನೇ ರ್‍್ಯಾಂಕ್‌ ಗಳಿಸಿದ ಅಭ್ಯರ್ಥಿಗಳಾದ ಭರತ್‌ ಕುಮಾರ್‌, ಸಾಯಿ ಪ್ರಣೀತ್‌ ಹಾಗೂ ಕೆ. ರಮಣ ಅವ­ರಿಗೆ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿರುವುದನ್ನು ಸಿಐಡಿ ಪತ್ತೆಹಚ್ಚಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.