ADVERTISEMENT

11 ಡಿಎಂಕೆ ಕಾರ್ಯಕರ್ತರ ಬಂಧನ

ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 19 ಮೇ 2014, 10:45 IST
Last Updated 19 ಮೇ 2014, 10:45 IST

ಚೆನ್ನೈ (ಪಿಟಿಐ): ಪಕ್ಷದ ಖಜಾಂಚಿ ಎಂ.ಕೆ.ಸ್ಟಾಲಿನ್ ಮನೆಯಲ್ಲಿ ಭಾನುವಾರ ಅವರ ಎದುರಿನಲ್ಲಿಯೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆಯ 11 ಕಾರ್ಯಕರ್ತರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಎಲ್ಲ ಆರೋಪಿಗಳನ್ನು ವೆಲ್ಲೂರು ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಪಕ್ಷದ ಆಂತರಿಕ ವಿಚಾರಗಳನ್ನು ಪ್ರಸಾರ ಮಾಡಿದ  ಮಾಧ್ಯಮಗಳ ವಿರುದ್ಧ ಭಾನುವಾರ ಪ್ರತಿಭಟನೆ ನಡೆಸಿದ ಡಿಎಂಕೆಯ ಒಂದು ಗುಂಪಿನ ಕಾರ್ಯಕರ್ತರು ಕೆಲ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಮೂವರು ಪತ್ರಕರ್ತರು ಗಾಯಗೊಂಡಿದ್ದರು.

ಘಟನೆ ಹಿನ್ನೆಲೆ:
ಲೋಕಸಭಾ ಚುನಾ­ವಣೆ­ಯಲ್ಲಿ ಡಿಎಂಕೆ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಕ್ಷದ ಖಜಾಂಚಿ ಎಂ.ಕೆ. ಸ್ಟಾಲಿನ್‌, ಕೆಲವೇ ಗಂಟೆ­ಗಳಲ್ಲಿ ವರಿಷ್ಠರ ಸಲಹೆ­ಯಂತೆ ನಿರ್ಧಾರ ಬದ­ಲಿ­ಸಿದ ಘಟನೆ ಭಾನುವಾರ ನಡೆದಿತ್ತು.

ತಮ್ಮ ಕಿರಿಯ ಪುತ್ರನ ರಾಜೀನಾಮೆ ನಂತರ ಪಕ್ಷದ ಹಿರಿಯರ ಜತೆ ಚರ್ಚಿ­ಸಿದ ಡಿಎಂಕೆ ಮುಖ್ಯಸ್ಥ ಮತ್ತು ತಮಿಳು­ನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾ­ನಿಧಿ, ನಿರ್ಧಾರ ಬದ­ಲಿ­­ಸಲು ಸ್ಟಾಲಿ­ನ್‌ ಅವರಿಗೆ ಸೂಚಿಸಿ­ದರು. ಇದ­ರ ಜತೆ ಪಕ್ಷದ ವಿವಿಧ ಮುಖಂಡರು ಮತ್ತು ಕಾರ್ಯ­ಕರ್ತರು ಸ್ಟಾಲಿನ್‌ ಮನೆಗೆ ಧಾವಿಸಿ ರಾಜೀ­­ನಾಮೆ ಹಿಂಪಡೆ­ಯಲು ಒತ್ತಡ ಹಾಕಿ­ದ್ದರು. 

ಈ ಬೆಳವಣಿಗೆ ಕುರಿತು ಸುದ್ದಿಗಾರರ ಜೊತೆ ಮಾತ­ನಾಡಿದ ಡಿಎಂಕೆ ಯುವ ಘಟಕದ ಮುಖ್ಯಸ್ಥರೂ ಆದ ಸ್ಟಾಲಿನ್‌, ಹಿರಿಯರ ಸಲಹೆಯಂತೆ ರಾಜೀ­­ನಾಮೆ ವಾಪಸ್‌ ಪಡೆದಿರುವು­ದಾಗಿ ತಿಳಿಸಿದ್ದರು.

ಆದರೆ, ಸ್ಟಾಲಿನ್‌ ರಾಜೀನಾಮೆ ಹಿಂಪ­­ಡೆ­­ದಿರುವುದನ್ನು ಅವರ ಹಿರಿ­ಯಣ್ಣ ಮತ್ತು ಪಕ್ಷದ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ, ಇದೊಂದು ‘ನಾಟಕ’ ಎಂದು ಟೀಕಿಸಿದ್ದರು.

ADVERTISEMENT

ದಿನಪೂರ್ತಿ ನಡೆದ ಈ ಬೆಳವಣಿಗೆಯನ್ನು ಪ್ರಸಾರ ಮಾಡಿದ ಕೆಲ ಮಾಧ್ಯಮಗಳ ವಿರುದ್ಧ ಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ವರದಿಗಾಗಿ ಸ್ಟಾಲಿನ್ ಮನೆಗೆ ಆಗಮಿಸಿದ್ದ ಕೆಲ ವರದಿಗಾರರ ಮೇಲೆ ಸ್ಟಾಲಿನ್ ಎದುರೇ ಹಲ್ಲೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.