ADVERTISEMENT

125 ಅಡಿಗಳ ಸುರಂಗ ಕೊರೆದು ಬ್ಯಾಂಕ್‌ ಲೂಟಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ಚಂಡೀಗಡ (ಪಿಟಿಐ): ಹರಿಯಾಣದ ಸೋನೆಪತ್ ಜಿಲ್ಲೆಯ ಗೊಹಾನದಲ್ಲಿ ಚಾಣಾಕ್ಷ ಕಳ್ಳರು 125 ಅಡಿ ಉದ್ದದ ಸುರಂಗ ಕೊರೆದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಶಾಖೆಯ ಲಾಕರ್‌ಗಳನ್ನು ಲೂಟಿ ಮಾಡಿದ್ದಾರೆ.

ಕಳ್ಳರು ದೋಚಿದ ನಗನಾಣ್ಯ ಮತ್ತು ನಗದಿನ ಮೌಲ್ಯದ ವಿವರವನ್ನು ಬ್ಯಾಂಕ್‌ನ ಅಧಿಕಾರಿಗಳು ಇನ್ನಷ್ಟೇ ಲೆಕ್ಕ ಹಾಕಬೇಕಿದ್ದು, ಅವುಗಳ ಮೌಲ್ಯ ಹಲವು ಕೋಟಿಗಳನ್ನು ದಾಟುತ್ತದೆ ಎನ್ನಲಾಗಿದೆ. ಲಾಕರ್‌ಗಳಲ್ಲಿದ್ದ ನಗನಾಣ್ಯಗಳ ಬಗ್ಗೆ ಬ್ಯಾಂಕ್‌ನ ಬಳಿ ದಾಖಲೆಗಳು ಇರುವುದಿಲ್ಲ. ಗ್ರಾಹಕರೇ ಈ ಬಗ್ಗೆ ವಿವರ ನೀಡಬೇಕು ಎಂದು ಬ್ಯಾಂಕ್‌ನ ಅಧಿಕಾರಿ­ಗಳು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಬ್ಯಾಂಕ್‌ನ ಬೀಗ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಮತ್ತು ಭಾನುವಾರ ಬ್ಯಾಂಕ್‌ಗೆ ರಜೆ ಇತ್ತು. ಈ ಅವಧಿಯಲ್ಲಿ ಲೂಟಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬ್ಯಾಂಕ್‌ ಸಮೀಪವಿರುವ ಮನೆ­ಯೊಂದ­ರಿಂದ ಸುರಂಗ ಕೊರೆಯ­ಲಾ­ಗಿದೆ. ಸುರಂಗವು 125 ಅಡಿ ಉದ್ದ­, 2.5 ಅಡಿ ಅಗಲವಿದೆ.  ಸುರಂಗ ತೋಡುವುದರ ಹಿಂದೆ ಭಾರಿ ಸಿದ್ಧತೆ ನಡೆದಿದ್ದು, ಯೋಜಿತ ರೀತಿ­ಯಲ್ಲಿ ಕಳ್ಳರು ವಸ್ತುಗಳನ್ನು ಹೊರಗೆ ಸಾಗಿಸಿ­ದ್ದಾರೆ. ಸುರಂಗ ಕೊರೆಯಲು ಬಳಸಿ­ಕೊಂಡ ಮನೆಯಲ್ಲಿ 45 ವರ್ಷಗಳಿಂದ ಯಾರೂ ವಾಸವಾಗಿರಲಿಲ್ಲ.

‘ಸುರಕ್ಷಾ ಮಾನದಂಡಗಳನ್ನು ಪಾಲಿಸದ ಬ್ಯಾಂಕ್’: ‘ಬ್ಯಾಂಕ್‌ನಲ್ಲಿ ಬಹುತೇಕ ಸುರಕ್ಷಾ ಮಾನದಂಡಗಳನ್ನು ಕಡೆಗಣಿಸ­ಲಾಗಿದೆ. ಸಿಸಿಟಿವಿ ಕ್ಯಾಮೆರಾ, ವಿದ್ಯು­ನ್ಮಾನ ರಕ್ಷಣಾ ವ್ಯವಸ್ಥೆ ಒಳಗೊಂಡಂತೆ ಬ್ಯಾಂಕ್‌­ನಲ್ಲಿ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಸೋನೆಪತ್‌ನ ಎಸ್ಪಿ ಅರುಣ್ ನೆಹ್ರಾ ತಿಳಿಸಿದ್ದಾರೆ.

‘ಆರ್‌ಬಿಐನ ಮಾರ್ಗಸೂಚಿಗಳ ಪ್ರಕಾರ ಲಾಕರ್‌ ರೂಮಿನ ನೆಲ ಮತ್ತು ಗೋಡೆಗಳನ್ನು ಹೆಚ್ಚು ದಪ್ಪನಾದ ಕಾಂಕ್ರೀಟ್‌ನಿಂದ ನಿರ್ಮಿಸಿ, ಲೋಹದ ಹಾಳೆಗಳಿಂದ ಮುಚ್ಚಬೇಕು. ಆದರೆ ಲಾಕರ್ ರೂಮಿನ ನೆಲವನ್ನು ಸಿಮೆಂಟ್‌­ನಿಂದ ನಿರ್ಮಿಸಿದ್ದು, ನೆಲವನ್ನು ಸುಲಭ­ವಾಗಿ ಅಗೆಯುವಲ್ಲಿ ಕಳ್ಳರು ಸಫಲರಾಗಿ­ದ್ದಾರೆ’ ಎಂದು ಅವರು ಹೇಳಿದ್ದಾರೆ.

ಆರೋಪವನ್ನು ಅಲ್ಲಗಳೆದಿರುವ ಬ್ಯಾಂಕ್‌ನ ಮ್ಯಾನೇಜರ್, ‘ಲಾಕರ್‌ ರೂಮಿನ ನೆಲಕ್ಕೆ ಮುಕ್ಕಾಲು ಅಡಿಯಷ್ಟು ಕಾಂಕ್ರೀಟ್‌ ಹಾಕಲಾಗಿದೆ. ಗೋಡೆಗ­ಳನ್ನೂ ಕಾಂಕ್ರೀಟ್‌ನಿಂದ ನಿರ್ಮಿಸಲಾ­ಗಿದೆ’ ಎಂದಿದ್ದಾರೆ.

‘ಧೂಮ್’ ಮಾದರಿಯಲ್ಲಿ ಲೂಟಿ:ಬಾಲಿವುಡ್‌ನ ಜನಪ್ರಿಯ ‘ಧೂಮ್‌’ ಸರಣಿಯ ಚಿತ್ರಗಳಲ್ಲಿ ನಡೆಯುವ ದರೋಡೆ­ಗಳ ಮಾದರಿಯಲ್ಲಿ ವ್ಯವಸ್ಥಿತ­ವಾಗಿ ಬ್ಯಾಂಕ್‌ ಲೂಟಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT