ADVERTISEMENT

18 ಅಂಶಗಳ ಪತ್ರಕ್ಕೆ ಕಾಂಗ್ರೆಸ್‌ ಉತ್ತರ

ಆಮ್‌ ಆದ್ಮಿಅಪಕ್ವತೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ನವದೆಹಲಿ (ಐಎಎನ್‌ಎಸ್‌): ಆಮ್‌ ಆದ್ಮಿ ಪಕ್ಷ ಬರೆದಿರುವ 18 ಅಂಶಗಳ ಪತ್ರಕ್ಕೆ ಕಾಂಗ್ರೆಸ್‌ ಉತ್ತರ ನೀಡಿದೆ. 18ರಲ್ಲಿ 16 ಅಂಶಗಳಿಗೆ ಶಾಸನಾತ್ಮಕ ಬೆಂಬಲದ ಅಗತ್ಯ ಇಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಆಮ್‌ ಆದ್ಮಿ ಪಕ್ಷ ಬರೆದಿರುವ ಪತ್ರವು ಆ ಪಕ್ಷದ ರಾಜಕೀಯ ಅಪಕ್ವತೆಯನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ಶಕೀಲ್‌ ಅಹ್ಮದ್‌ ಹೇಳಿದ್ದಾರೆ.

18ರಲ್ಲಿ 16 ಅಂಶಗಳು ಆಡಳಿತಾ­ತ್ಮಕ ವಿಷಯಗಳು. ಯಾವುದೇ ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿದೆ. ಸರ್ಕಾರ ರಚನೆ­ಯಾದ ನಂತರ ಈ ಅಂಶಗಳ ಜಾರಿಗೆ ಶಾಸನ ಸಭೆಯ ಒಪ್ಪಿಗೆ ಕೂಡ ಅಗತ್ಯವಿಲ್ಲ ಎಂದು ಆಮ್‌ ಆದ್ಮಿ ಪಕ್ಷಕ್ಕೆ ಬರೆದ ಪತ್ರದಲ್ಲಿ ಶಕೀಲ್‌ ಅಹ್ಮದ್‌ ವಿವರಿಸಿದ್ದಾರೆ.

ಉಳಿದ ಎರಡು ಅಂಶಗಳಾದ ಜನ ಲೋಕಪಾಲ ಮಸೂದೆ ಮತ್ತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ದೆಹಲಿ ಸರ್ಕಾ­ರದ ವ್ಯಾಪ್ತಿಯಿಂದ ಹೊರಗಿನ ವಿಚಾ­ರ ಎಂದು ಕಾಂಗ್ರೆಸ್‌ ಹೇಳಿದೆ.

ಮುಂದಿನ 48 ಗಂಟೆಗಳೊಳಗೆ ಸಭೆ ಸೇರಿ ಕಾಂಗ್ರೆಸ್‌ ಉತ್ತರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಮನೀಶ್‌ ಸಿಸೋಡಿಯ ತಿಳಿಸಿದ್ದಾರೆ.

ನಮಗೆ ಸರ್ಕಾರ ರಚಿಸುವ ಬಯಕೆ ಇದೆ. ಆದರೆ ಅದಕ್ಕಾಗಿ ನಾವು ಯಾವುದೇ ಪಕ್ಷದೊಂದಿಗೆ ತೆರೆ­ಮರೆಯ  ಮಾತುಕತೆ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.