ADVERTISEMENT

28ರಂದು ಇಂಡಿಯಾಗೇಟ್‌ ಬಳಿ ವಿಶೇಷ ಕಾರ್ಯಕ್ರಮ

ಮೋದಿ ಸರ್ಕಾರಕ್ಕೆ ಎರಡು ವರ್ಷ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ವರ್ಷ ಪೂರೈಸುತ್ತಿದ್ದು, ಇದರ ಅಂಗವಾಗಿ ಮೇ 28ರಂದು ಇಂಡಿಯಾ ಗೇಟ್‌ ಬಳಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಹೆಚ್ಚಿನ ಸಚಿವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

‘ಜರ ಮುಸ್ಕುರಾದೋ’ (ಸ್ವಲ್ಪ ನಕ್ಕುಬಿಡಿ) ಹೆಸರಿನ ಈ ಕಾರ್ಯಕ್ರಮದ ಮೂಲಕ ಸರ್ಕಾರದ ಎರಡು ವರ್ಷಗಳ ಸಾಧನೆಯನ್ನು ಬಿಚ್ಚಿಡಲಾಗುವುದು. ದೂರದರ್ಶನ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಿದೆ.

ಸರ್ಕಾರ ಎರಡು ವರ್ಷಗಳಲ್ಲಿ ಜಾರಿಗೆ ತಂದಿರುವ ಸ್ವಚ್ಛಭಾರತ ಅಭಿಯಾನ, ಡಿಜಿಟಲ್‌ ಇಂಡಿಯಾ, ಗ್ರಾಮೀಣ ವಿದ್ಯುದೀಕರಣ ಮುಂತಾದ ಪ್ರಮುಖ ಯೋಜನೆಗಳ ಪ್ರಗತಿಯನ್ನು ಈ ಕಾರ್ಯಕ್ರಮದ ಮೂಲಕ ಪ್ರಚುರಪಡಿಸಲಾಗುವುದು.

ಇದಲ್ಲದೆ ದೇಶದ ವಿವಿಧ ನಗರಗಳಲ್ಲಿ ಇಂಥ ಹಲವು ಕಾರ್ಯಕ್ರಮ ಆಯೋಜಿಸಲು ಸರ್ಕಾರ ತೀರ್ಮಾನಿಸಿದ್ದು, ಇದರ ಉಸ್ತುವಾರಿಗಾಗಿ ಸಚಿವರಾದ ವೆಂಕಯ್ಯ ನಾಯ್ಡು,  ನಿತಿನ್ ಗಡ್ಕರಿ, ಪೀಯೂಷ್‌ ಗೋಯಲ್‌, ರಾಜ್ಯವರ್ಧನಸಿಂಗ್‌ ರಾಥೋಡ್‌ ಮುಂತಾದವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸರ್ಕಾರದ ಯಾವ್ಯಾವ ಯೋಜನೆಗೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಈ ಸಮಿತಿ ಈಗಾಗಲೇ ವಿಸ್ತೃತ ಯೋಜನೆ ರೂಪಿಸಿದೆ.

ಸರ್ಕಾರಕ್ಕೆ ಒಂದು ವರ್ಷ ತುಂಬಿದಾಗ ‘ಸಾಲ್‌ ಏಕ್‌, ಷುರುವಾತ್‌ ಅನೇಕ್‌’ (ವರ್ಷ ಒಂದು, ಆರಂಭ ಹಲವು) ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವರ್ಷ ಮೇ 26ರಿಂದ ಜೂನ್‌ 10ರೊಳಗಿನ ಅವಧಿಯಲ್ಲಿ ದೇಶದ ವಿವಿಧ ನಗರಗಳಲ್ಲಿ ಒಟ್ಟಾರೆ 200 ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ದೇಶದ ಹಲವೆಡೆ ರ್‌್ಯಾಲಿಗಳನ್ನು ಸಹ ಆಯೋಜಿಸಲಾಗುತ್ತಿದ್ದು, ಪ್ರಧಾನಿ ಮೋದಿ ಅವರು ಹಲವು ರ್‌್ಯಾಲಿಗಳಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಮೊದಲ ರ್‌್ಯಾಲಿ ಮೇ 26ರಂದು ಉತ್ತರಪ್ರದೇಶದ ಸಹಾರಾನ್‌ಪುರದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.