ADVERTISEMENT

3.23 ಲಕ್ಷ ಕಾರು ವಾಪಸ್‌

ಮಾಲಿನ್ಯ ತಪಾಸಣೆಯಲ್ಲಿ ಫೋಕ್ಸ್‌ವ್ಯಾಗನ್‌ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ನವದೆಹಲಿ (ಪಿಟಿಐ): ಮಾಲಿನ್ಯ ತಪಾಸಣೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಜರ್ಮನಿ ಮೂಲದ ಫೋಕ್ಸ್‌ವ್ಯಾಗನ್‌ ಸಮೂಹ ಆಡಿ, ಸ್ಕೋಡಾ ಹಾಗೂ ಫೋಕ್ಸ್‌ವ್ಯಾಗನ್‌  ಸೇರಿ ಸುಮಾರು 3.23 ಲಕ್ಷ ಕಾರುಗಳನ್ನು ಭಾರತದ ಮಾರುಕಟ್ಟೆಯಿಂದ ವಾಪಸ್‌ ಪಡೆಯುವುದಾಗಿ  ಪ್ರಕಟಿಸಿದೆ.

ಫೋಕ್ಸ್‌ವ್ಯಾಗನ್‌ ತನ್ನ ಡೀಸೆಲ್‌ ಕಾರುಗಳಲ್ಲಿ ಮಾಲಿನ್ಯ ಪರೀಕ್ಷೆ ವೇಳೆ ಫಲಿತಾಂಶದ ದಿಕ್ಕುತಪ್ಪಿಸುವ ಉಪಕರಣವೊಂದನ್ನು ಅಳವಡಿಸಿರುವುದು ಪತ್ತೆಯಾಗಿದ್ದು, ಕೇಂದ್ರ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿತ್ತು.

ಭಾರತದ ಮಾರುಕಟ್ಟೆಯಲ್ಲಿರುವ ‘ಇಎ 189’ ಎಂಜಿನ್‌ನ 3 ಲಕ್ಷ, 23 ಸಾವಿರದ 700 ಕಾರುಗಳನ್ನು ಸ್ವಯಂಪ್ರೇರಣೆಯಿಂದ ಹಿಂದಕ್ಕೆ ಪಡೆದುಕೊಳ್ಳುವುದಾಗಿ ಕಂಪೆನಿ ಪ್ರಕಟಿಸಿದೆ. 2008ರಿಂದ 2015ರ ನವೆಂಬರ್‌ವರೆಗೆ ಭಾರತದಲ್ಲಿ ಮಾರಾಟ ಮಾಡಿದ ಕಾರುಗಳನ್ನು ಅದು ವಾಪಸ್‌ ಪಡೆಯಲಿದೆ.

‘ಈ ಸಮೂಹದ ದಾಖಲೆಗಳ ಪ್ರಕಾರ 2008ರಿಂದ 2015ರ ನವೆಂಬರ್‌ವರೆಗೆ ‘ಇಎ 189 ’ ಎಂಜಿನ್‌ ಹೊಂದಿರುವ ಅಂದಾಜು 1,98,500 ಫೋಕ್ಸ್‌ವ್ಯಾಗನ್‌, 88,700 ಸ್ಕೋಡಾ ಮತ್ತು 36,500 ಆಡಿ ಕಾರುಗಳನ್ನು ದೇಶದಾದ್ಯಂತ ಮಾರಾಟ ಮಾಡಲಾಗಿದೆ.

ನೈಟ್ರೋಜನ್‌ ಆಕ್ಸೈಡ್‌ ಹೆಚ್ಚಳ
ನವದೆಹಲಿ (ಪಿಟಿಐ): ಭಾರತದಲ್ಲಿ ಸಿದ್ಧಪಡಿಸಲಾದ ಫೋಕ್ಸ್‌ವ್ಯಾಗನ್‌ ಕಂಪೆನಿಯ ಡೀಸೆಲ್‌ ಕಾರುಗಳಲ್ಲಿ ಮಾಲಿನ್ಯ ತಪಾಸಣೆ ವಂಚಿಸುವ ಉಪಕರಣವನ್ನು ಅಳವಡಿಸಲಾಗಿದ್ದು, ಇದರಿಂದಾಗಿ  ವಾತಾವರಣದಲ್ಲಿ ನೈಟ್ರೋಜನ್‌ ಆಕ್ಸೈಡ್‌ ಪ್ರಮಾಣ ಹೆಚ್ಚಲು ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಪ್ರಾಥಮಿಕ ತನಿಖೆಯ ಬಳಿಕ ಇ189 ಎಂಜಿನ್‌ನ ಕಾರುಗಳಲ್ಲಿ ಈ ಉಪಕರಣವನ್ನು ಅಳವಡಿಸಿರುವುದು ಪತ್ತೆಯಾಗಿದೆ ಎಂದು ಬೃಹತ್‌ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ್‌ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT