ADVERTISEMENT

350 ಟೋಲ್‌ ಕೇಂದ್ರಗಳಲ್ಲಿ ಇಟಿಸಿ

₨50 ಕೋಟಿಗೂ ಕಡಿಮೆ ವೆಚ್ಚದ ಹೆದ್ದಾರಿ ಟೋಲ್‌ ಮುಕ್ತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಹೆದ್ದಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಶುಕ್ರವಾರ ಎರಡು ಪ್ರಮುಖ ನಿರ್ಧಾ­ರ­ ಘೋಷಿಸಿದೆ. ₨ 50 ಕೋಟಿಗಿಂತ ಕಡಿಮೆ ಹೂಡಿಕೆ ಮಾಡಿ ಅಭಿವೃದ್ಧಿಪಡಿಸಿರುವ ಹೆದ್ದಾರಿಗಳನ್ನು ಟೋಲ್‌ ಮುಕ್ತ­ಗೊಳಿಸಲು ನಿರ್ಧರಿಸಲಾಗಿದೆ. ದೇಶ­ದಲ್ಲಿ 350 ಟೋಲ್‌ ಕೇಂದ್ರಗಳನ್ನು ಆಧುನಿಕಗೊಳಿಸಿ ಎಲೆಕ್ಟ್ರಾನಿಕ್ಸ್‌ ಸೌಲಭ್ಯ ಅಳವಡಿಸಲೂ ನಿರ್ಧರಿಸಲಾಗಿದೆ.

ಡಿಸೆಂಬರ್‌ 31ರೊಳಗೆ ದೇಶದ 350 ಟೋಲ್‌ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ (ಇಟಿಸಿ) ವ್ಯವಸ್ಥೆ ಅಳವಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ₨ 50 ಕೋಟಿಗಿಂತ ಕಡಿಮೆ ಹೂಡಿಕೆ ಮಾಡಿರುವ ಹೆದ್ದಾರಿಗಳ ಟೋಲ್‌ ಕೇಂದ್ರಗಳನ್ನು ರದ್ದುಪಡಿಸುವ ನಿರ್ಧಾ­ರವನ್ನೂ ಗಡ್ಕರಿ ಪ್ರಕಟಿಸಿದ್ದಾರೆ. ‘ನಾವು ಈಗಾಗಲೇ 27 ಟೋಲ್‌ ಕೇಂದ್ರಗಳನ್ನು ರದ್ದುಪಡಿಸಿದ್ದೇವೆ. ಮುಂದಿನ ವರ್ಷ ಇನ್ನೂ 45 ಟೋಲ್‌ ಕೇಂದ್ರಗಳನ್ನು ರದ್ದುಪಡಿಸುತ್ತೇವೆ’ ಎಂದು ಗಡ್ಕರಿ ಹೇಳಿದ್ದಾರೆ.

ದೆಹಲಿ–ಮುಂಬೈ ಹೆದ್ದಾರಿ­ಯಲ್ಲಿ ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ (ಇಟಿಸಿ) ಕೇಂದ್ರವನ್ನು ಉದ್ಘಾಟಿಸಿ ಗಡ್ಕರಿ ಅವರು ಮಾತನಾಡಿದರು. ಎಲೆಕ್ಟ್ರಾನಿಕ್‌ ಟೋಲ್‌ ವ್ಯವಸ್ಥೆಯು ನಕಲಿ ಟೋಲ್‌ ಕೇಂದ್ರಗಳಿಗೆ ತಡೆ ಒಡ್ಡಲಿದೆ ಎಂದೂ ಅವರು ತಿಳಿಸಿದರು. ‘ಇಟಿಸಿ ಆರಂಭಗೊಂಡ ನಂತರ ಪ್ರತಿ­ಯೊಂದೂ ದಾಖಲಾಗಲಿದೆ. ರಸ್ತೆಯಲ್ಲಿ ಸಾಗುವ ವಾಹನ ಪ್ರಮಾಣದ ನಿಖರವಾದ ಲೆಕ್ಕವೂ ಸಿಗಲಿದೆ’ ಎಂದು ಗಡ್ಕರಿ ಹೇಳಿದರು.

ಇಟಿಸಿ ವ್ಯವಸ್ಥೆಯಲ್ಲಿ ವಾಹನಗಳ ಮುಂಭಾಗದ ಗಾಜಿಗೆ ರೇಡಿಯೊ ತರಂಗಾಂತರ ಗುರುತಿನ ಸಾಧನ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಡಿವೈಸ್‌) ಅಳವಡಿಸಲಾಗುವುದು. ಇದನ್ನು ಫಾಸ್ಟ್ಯಾಗ್‌್ ಎಂದು  ಕರೆಯಲಾಗುತ್ತದೆ. ಇಂತಹ ವಾಹನವು ಟೋಲ್‌ ಸಂಗ್ರಹ ಕೇಂದ್ರವನ್ನು ಹಾದು ಹೋಗುವಾಗು ವಾಹನ ಮಾಲೀಕರ ಪೂರ್ವಪಾವತಿ (ಪ್ರೀಪೈಡ್‌) ಖಾತೆಯಿಂದ ಹಣ ಕಡಿತವಾಗುತ್ತದೆ. ಬ್ಯಾಂಕುಗಳು ಸ್ಥಾಪಿಸುವ ಕೇಂದ್ರೀಯ ವ್ಯವಸ್ಥೆಯ ಮೂಲಕ ಪ್ರೀಪೈಡ್‌ ಖಾತೆಗಳನ್ನು ಒದಗಿಸಲಾಗುವುದು.

ಈ ವ್ಯವಸ್ಥೆಯನ್ನು ವಾಹನ ಮಾಲೀ­ಕರಿಗೆ ಉಚಿತವಾಗಿ ಒದಗಿಸುವುದಕ್ಕೆ ಮುಂದೆ ಬರುವಂತೆ ರಾಜ್ಯ ಸರ್ಕಾರಗಳನ್ನು ಕೇಂದ್ರ ಕೇಳಿಕೊಂಡಿದೆ ಎಂದು ಗಡ್ಕರಿ ಹೇಳಿದ್ದಾರೆ. ಇಟಿಸಿಯಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವಾ­ಗಲಿದೆ. ದೆಹಲಿ–ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 18 ಟೋಲ್‌ ಸಂಗ್ರಹ ಕೇಂದ್ರಗಳಿವೆ. ಪ್ರತಿಯೊಂದು ಕೇಂದ್ರದಲ್ಲಿಯೂ ಹಣ ಪಾವತಿಸುವುದಕ್ಕೆ 10 ನಿಮಿಷ ಬೇಕಾಗುತ್ತದೆ. ಹೀಗಾಗಿ ಒಟ್ಟು ಪ್ರಯಾಣದಲ್ಲಿ ಮೂರು ತಾಸು ವಿಳಂಬವಾಗುತ್ತದೆ. ಇಟಿಸಿ ವ್ಯವಸ್ಥೆ ಜಾರಿಗೆ ಬಂದರೆ ಈ ವಿಳಂಬ ತಪ್ಪುತ್ತದೆ.

‘ಫಾಸ್ಟ್ಯಾಗ್‌ ಟೋಲ್‌ ಸಂಗ್ರಹ ವ್ಯವಸ್ಥೆಯು ಟೋಲ್‌ ಸಂಗ್ರಹ ಕೇಂದ್ರದ ಅನನುಕೂಲಗಳನ್ನು ತೊಡೆದು ಹಾಕುತ್ತದೆ. ಜೊತೆಗೆ ವಾಹನಗಳು ನಿಲ್ಲದೆ ಸಾಗುವುದರಿಂದ ವಾರ್ಷಿಕ ₨ 60 ಸಾವಿರ ಕೋಟಿ ಮೌಲ್ಯದ ಇಂಧನ ಉಳಿತಾಯವಾಗುವ ಸಾಧ್ಯತೆ ಇದೆ’ ಎಂದು ಗಡ್ಕರಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.