ADVERTISEMENT

370ನೇ ಕಲಂ ಬಗ್ಗೆ ವಾಗ್ದಾನ ಕೇಳಿದ ಪಿಡಿಪಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2014, 10:39 IST
Last Updated 27 ಡಿಸೆಂಬರ್ 2014, 10:39 IST

ಶ್ರೀನಗರ (ಪಿಟಿಐ): ವಿವಾದಿತ 370ನೇ ಕಲಂ ಹಾಗೂ ಸಶಸ್ತ್ರ ಸೇನಾ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ಬಗ್ಗೆ ಅಭಿಪ್ರಾಯಗಳನ್ನು ಸ್ಪಷ್ಟಪಡಿಸುವಂತೆ ಸರ್ಕಾರ ರಚನೆಗೆ ಬೆಂಬಲ ನೀಡಲು ಉತ್ಸುಕವಾಗಿರುವ ಪಕ್ಷಗಳಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪೀಪಲ್ಸ್‌ ಡೆಮೊಕ್ರಟಿಕ್‌ ಪಕ್ಷವು (ಪಿಡಿಪಿ) ಕೋರಿದೆ. ಈ ಮೂಲಕ ಬಿಜೆಪಿಯೊಂದಿಗೆ ಜೊತೆ ಕೈ ಜೋಡಿಸುವ ಸುಳಿವು ನೀಡಿದೆ.

‘ಈಗಲೂ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ. ಯಾವ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ಪಿಡಿಪಿ ವಕ್ತಾರ ನಯೀಮ್ ಅಖ್ತರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅದಾಗ್ಯೂ, 87 ಸದಸ್ಯ ಬಲದ ವಿಧಾನಸಭೆಯಲ್ಲಿ 28 ಸ್ಥಾನಗಳನ್ನು ಹೊಂದಿರುವ ಪಿಡಿಪಿ, ಬಿಜೆಪಿ ಸಹಕಾರದೊಂದಿಗೆ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆಗಳ ಬಗ್ಗೆ ಸುಳಿವು ನೀಡಿದೆ.

ADVERTISEMENT

ಸರ್ಕಾರ ರಚನೆಯ ಬಗ್ಗೆ ಪಿಡಿಪಿ ನಾಯಕರು ಎಲ್ಲಾ ಅವಕಾಶಗಳ ಬಗ್ಗೆ ಚರ್ಚಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ಸರ್ಕಾರವನ್ನು ಸೇರುವ ಯಾವುದೇ ಪಕ್ಷವಾದರೂ ಅವುಗಳೊಂದಿಗೆ ಕೆಲವು ಸಮಸ್ಯೆಗಳ ಬಗ್ಗೆ ಒಮ್ಮತಾಭಿಪ್ರಾಯ ವ್ಯಕ್ತವಾಗಬೇಕಿದೆ. ಈ ಸಂಬಂಧ ಮೈತ್ರಿ ಪಕ್ಷದಿಂದ ವಾಗ್ದಾನದ ಅಗತ್ಯವಿದೆ’ ಎಂದು ಅಖ್ತರ್‌ ನುಡಿದಿದ್ದಾರೆ.

ಸರ್ಕಾರ ರಚನೆಯ ನಿಟ್ಟಿನಲ್ಲಿ ರಾಜ್ಯಪಾಲರಾದ ಎನ್‌.ಎನ್‌. ವೊಹ್ರಾ ಅವರು ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಪಿಡಿಪಿ (28 ಸ್ಥಾನ) ಹಾಗೂ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು (25 ಸ್ಥಾನ) ಪ್ರತ್ಯೇಕವಾಗಿ ಮಾತುಕತೆಗೆ ಆಹ್ವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.