ADVERTISEMENT

370ನೇ ವಿಧಿ ರದ್ದತಿ: ಪಕ್ಷಗಳ ವಿಶ್ವಾಸ ಅಗತ್ಯ

ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌

​ಪ್ರಜಾವಾಣಿ ವಾರ್ತೆ
Published 30 ಮೇ 2014, 19:30 IST
Last Updated 30 ಮೇ 2014, 19:30 IST

ಬಂಠಿಡಾ (ಪಿಟಿಐ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವುದಕ್ಕೆ ಮೊದಲು ಎಲ್ಲಾ ರಾಜಕೀಯ ಪಕ್ಷ­ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳಿತು ಎಂದು ಪಂಜಾಬ್‌ ಮುಖ್ಯ­ಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಸೂಕ್ಷ್ಮ ವಿಷಯವಾದ 370ನೇ ವಿಧಿ ಬಗ್ಗೆ ಆತುರದಲ್ಲಿ ತೀರ್ಮಾನ ಕೈಗೊಳ್ಳು­ವುದು ತರವಲ್ಲ. ಈ ವಿಷಯದಲ್ಲಿ ಸೌಹಾರ್ದವಾಗಿ ವರ್ತಿಸುವುದು ಸಮಂಜಸ’ ಎಂದರು.

ದೇಶವನ್ನು ಬಹುಕಾಲದಿಂದ ಕಾಡು­ತ್ತಿ­ರುವ ಕಪ್ಪುಹಣ ವಿಷಯ ಕುರಿತಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ಮೋದಿ ಅವರನ್ನು ಶ್ಲಾಘಿ­ಸಿದ ಬಾದಲ್‌, ಪಾಕಿಸ್ತಾನ ಗಡಿಯಲ್ಲಿ ಅಕ್ರಮವಾಗಿ ನಡೆಯುತ್ತಿ­ರುವ ಮಾದಕವಸ್ತು ಕಳ್ಳಸಾಗಣೆ ತಡೆಯಲು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಆತುರ ಬೇಡ: ಮಾಯಾವತಿ
(ಲಖನೌ ವರದಿ
): ಸಂವಿಧಾನದ 370ನೇ ವಿಧಿ ಕುರಿತು ಅವಸರದ ನಿರ್ಧಾರದಿಂದ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ  ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದರು.
370ನೇ ವಿಧಿ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಲು ನಿರಾಕರಿಸಿದ ಅವರು, ಮೊದಲು ಕೇಂದ್ರ ಈ ಬಗ್ಗೆ ತನ್ನ ನಿರ್ಧಾರ ಸ್ಪಷ್ಟಪಡಿಸಲಿ ಎಂದರು.

ಸೂಕ್ಷ್ಮ ವಿಷಯಗಳ ಕೆದಕದಂತೆ ಎಚ್ಚರಿಕೆ
(ನವದೆಹಲಿ ವರದಿ
): ಸಂವಿಧಾನದ 370ನೇ ವಿಧಿ ಮತ್ತು ಸಮಾನ ನಾಗರಿಕ ಸಂಹಿತೆ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ ಎನ್ನುವ ಮೂಲಕ ಕೇಂದ್ರ ಸರ್ಕಾರ ಸೂಕ್ಷ್ಮ ವಿಷಯಗಳನ್ನು ಕೆದಕಲು ಯತ್ನಿಸುತ್ತಿದೆ. ಇದರಿಂದ ದೇಶದಲ್ಲಿ ಅಹಿತಕರವಾದ ಒಡಕು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ.

‘ಮುಕ್ತ ಚರ್ಚೆಯಾಗಲಿ ಎನ್ನುವುದೇನೋ ಸರಿ; ಆದರೆ,  ಇದು ದೇಶವನ್ನು ಒಡೆದು ಸಂಕಷ್ಟಕ್ಕೆ ದೂಡುವಂತಹ ವಿಷಯಗಳನ್ನು ಜಾರಿಗೊಳಿಸಲು ಸರ್ಕಾ­ರಕ್ಕೆ ಪರವಾನಗಿ ನೀಡುವುದಿಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಶಶಿ ತರೂರ್‌  ಶುಕ್ರವಾರ ಹೇಳಿದರು.

ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ಅವರು ಡೆಹ್ರಾಡೂನ್‌ನಲ್ಲಿ ಸಂವಿಧಾನದ 370ನೇ ವಿಧಿ ಮತ್ತು ಸಮಾನ ನಾಗರಿಕ ಸಂಹಿತೆ ಕುರಿತು ಮುಕ್ತವಾಗಿ ಚರ್ಚೆ ಆಗಬೇಕು ಎಂದು ಹೇಳಿದ್ದರು.

ವ್ಯತಿರಿಕ್ತ ಪರಿಣಾಮ– ಮಾಂಝಿ
(ಪಟ್ನಾ ವರದಿ): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದರೆ  ಅದು ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ಜಿತನ್‌ ರಾಂ ಮಾಂಝಿ ಹೇಳಿದರು. ಗಯಾದಲ್ಲಿ ಗುರುವಾರ ಸಂಜೆ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಎನ್‌ಡಿಎ ಸಖ್ಯ ತೊರೆದ ಜೆಡಿಯು ನಿರ್ಧಾರವನ್ನು ಸಮರ್ಥಿಸಿಕೊಂಡ ಮಾಂಝಿ, ‘ವಿವಾದಾತ್ಮಕ ವಿಷಯಗಳಾದ 370ನೇ ವಿಧಿ, ಸಮಾನ ನಾಗರಿಕ ಸಂಹಿತೆಗಳ ಬಗ್ಗೆ ಚಕಾರ ಎತ್ತಬಾರದು. ಪರಸ್ಪರ ಮಾತುಕತೆ ಇಲ್ಲವೆ ನ್ಯಾಯಾಲಯದ ಆದೇಶದ ಅನುಸಾರವಷ್ಟೇ ಆಯೋಧ್ಯಾ ವಿವಾದ ಬಗೆಹರಿಯಬೇಕು ಎಂಬ ಷರತ್ತಿಗೆ ಅನುಸಾರವೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಆದರೆ, ಬಿಜೆಪಿ ಒಪ್ಪಂದವನ್ನು ಮುರಿದಿದ್ದರಿಂದ  ಆ ಪಕ್ಷದ ಸಖ್ಯ ತೊರೆಯಬೇಕಾಯಿತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.