ADVERTISEMENT

5 ತಿದ್ದುಪಡಿಗಳೊಂದಿಗೆ ರಾಜ್ಯಸಭೆಯಲ್ಲಿ ಹಣಕಾಸು ಮಸೂದೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2017, 15:15 IST
Last Updated 29 ಮಾರ್ಚ್ 2017, 15:15 IST
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ   

ನವದೆಹಲಿ: ಐದು ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಲಭಿಸಿದೆ.

ಬುಧವಾರ ರಾಜ್ಯಸಭೆಯಲ್ಲಿ ಹಣಕಾಸು ಮಸೂದೆ 2017 ಅಂಗೀಕಾರ ನೀಡುವ ಮುನ್ನ ಅದರಲ್ಲಿ ತಿದ್ದುಪಡಿ ಮಾಡಬೇಕೆಂದು ವಿಪಕ್ಷಗಳು ಒತ್ತಾಯಿಸಿದ್ದವು.

ಕಾಂಗ್ರೆಸ್ ಸದಸ್ಯರಾದ ದಿಗ್ವಿಜಯ್ ಸಿಂಗ್ ಅವರು ಮೂರು ತಿದ್ದುಪಡಿ ಸೂಚಿಸಿದ್ದು, ಸಿಪಿಐ(ಎಂ) ಸದಸ್ಯ ಸೀತಾರಾಂ ಯೆಚೂರಿ ಅವರು ಎರಡು ತಿದ್ದುಪಡಿ ಸೂಚಿಸಿದ್ದರು. ಈ ತಿದ್ದುಪಡಿಗೆ ರಾಜ್ಯಸಭೆಯಲ್ಲಿ 34 ಮತಗಳೊಂದಿಗೆ ಸಮ್ಮತಿ ಲಭಿಸಿದೆ.

ADVERTISEMENT

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕಾಗಿ ಮತದಾನ ನಡೆದಿದ್ದು, 245 ಸದಸ್ಯರಿರುವ ರಾಜ್ಯಸಭೆಯಲ್ಲಿ  ಬಿಜೆಪಿಯ 56 ಸದಸ್ಯರಿದ್ದಾರೆ. ಆದಾಗ್ಯೂ ಎನ್‍ಡಿಎಗೆ  74 ಸದಸ್ಯರಿದ್ದಾರೆ.

ಮತದಾನ ನಡೆಯುವ ವೇಳೆ 10 ಸದಸ್ಯರಿರುವ ತೃಣಮೂಲ ಕಾಂಗ್ರೆಸ್ ಸದನದಿಂದ ಹೊರ ನಡೆದು ಬಹಿಷ್ಕಾರ ಸೂಚಿಸಿದೆ.

ಹಣಕಾಸು ಮಸೂದೆಯ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡುವುದರಿಂದ ಆದಾಯ ತೆರಿಗೆಯಲ್ಲಿ ಮೋಸ ಮತ್ತು ಇನ್ನಿತರ ವಂಚನೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಆಧಾರ್ ಯುಪಿಎ ಸರ್ಕಾರದ ಉತ್ತಮ ಕಾರ್ಯವಾಗಿದ್ದು, ಎನ್‍ಡಿಎ ಅದರ ಕಾರ್ಯ ವಿಧಾನವನ್ನು ವಿಸ್ತರಿಸಿದೆ ಎಂದಿದ್ದಾರೆ.

ಈ ಹಿಂದೆ ನಮ್ಮಲ್ಲಿರುವ ಕೆಲವರಿಗೆ ಅಂದರೆ ಕಾಂಗ್ರೆಸ್‍ನಲ್ಲಿರುವವರಿಗೂ ಈ ಬಗ್ಗೆ ಸಂದೇಹಗಳಿದ್ದವು. ನಂತರ ಪ್ರಧಾನಿ ಮೋದಿಯವರು ಈ ಬಗ್ಗೆ ಮನದಟ್ಟು ಮಾಡಿದ ನಂತರ ಈ ಸಂದೇಹಗಳೆಲ್ಲ ಬಗೆಹರಿದಿವೆ ಎಂದಿದ್ದಾರೆ.

ಆಧಾರ್ ಕಡ್ಡಾಯಗೊಳಿಸಿದ್ದು ಯಾಕೆ ಎಂದು ಕಾಂಗ್ರೆಸ್ ಸದಸ್ಯರು ಪದೇ ಪದೇ ಪ್ರಶ್ನೆ ಕೇಳಿದ್ದು, ಇದಕ್ಕೆ ಉತ್ತರಿಸಿದ ಜೇಟ್ಲಿ, ಸಾರ್ವಜನಿಕರ ಹಿತಾಸಕ್ತಿಗಾಗಿ ತಂತ್ರಜ್ಞಾನವನ್ನು ರೂಪಿಸಿರುವಾಗ ಅದನ್ನು ಅವರಿಗಾಗಿ ಬಳಸುವುದರಲ್ಲಿ ತಪ್ಪೇನಿದೆ? ಎಂದಿದ್ದಾರೆ.

ಆಧಾರ್ ಕಾರ್ಡ್ ಮಾಹಿತಿಗಳು ಹ್ಯಾಕಿಂಗ್ ಮೂಲಕ ಬಹಿರಂಗವಾಗಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡುತ್ತದೆಯೇ? ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರಶ್ನಿಸಿದಾಗ, ಹ್ಯಾಕಿಂಗ್ ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಫೈರ್‍‍ವಾಲ್ ಮತ್ತಷ್ಟು ಸ್ಟ್ರಾಂಗ್ ಮಾಡಲಾಗುವುದು ಎಂದು ಜೇಟ್ಲಿ ಉತ್ತರಿಸಿದ್ದಾರೆ.

ಫೈರ್‍‍ವಾಲ್ ‍ನ್ನು ಭೇದಿಸಿ, ಹ್ಯಾಕಿಂಗ್ ಮಾಡಬಹುದು. ಎಲ್ಲಿ ಬೇಕಾದರೂ ಹ್ಯಾಕಿಂಗ್ ಮಾಡಲು ಸಾಧ್ಯ, ಆದರೆ ಆಧಾರ್‍‍ನಿಂದಾಗಿಯೇ ಹ್ಯಾಕ್ ಆಗಲ್ಲ ಎಂದು ಹೇಳಿದ ಜೇಟ್ಲಿ  ಅಮೆರಿಕದ ಪೆಂಟಗನ್‍ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಕ್ರಿಕೆಟಿಗ ಎಂಎಸ್ ದೋನಿ ಅವರ ಆಧಾರ್ ಮಾಹಿತಿ ಟ್ವಿಟರ್‍‍ನಲ್ಲಿ ಬಹಿರಂಗವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ವಿತ್ತ ಸಚಿವರು ರಾಂಚಿಯಲ್ಲಿದ್ದ ಕೆಲವರ 'ಬಾಲಿಶ' ಕೃತ್ಯದಿಂದಾಗಿ ಈ ರೀತಿಯಾಗಿದೆ. ಈ ಕೃತ್ಯವನ್ನೆಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ಕೃತ್ಯಕ್ಕೆ ತಂತ್ರಜ್ಞಾನದ ಮೇಲೆ ಗೂಬೆ ಕೂರಿಸುವಂತಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.